ಬಂಟ್ವಾಳ(ದಕ್ಷಿಣ ಕನ್ನಡ):ಓದುವುದರಲ್ಲಿ ಮೊದಲಿಗ, ಬರೆಯುವುದರಲ್ಲಿ ಬಹುಮಾನಿತ. ಭಾಷಣಕ್ಕೆ ಹೊರಟರೆ, ಉತ್ತಮ ವಾಕ್ಪಟು. ರಸಪ್ರಶ್ನೆ ಕೇಳಿ, ಪಟಪಟನೆ ಉತ್ತರ ಕೊಡುವ ಈ ಯುವಕನ ಹೆಸರು ಆದಿತ್ಯ. ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಅಂತಿಮ ಬಿ.ಕಾಂ ಪದವಿಯಲ್ಲಿ ಶೇ.93.8 ಅಂಕ ಗಳಿಸಿದ್ದು, ಅಧಿಕೃತ ರ‍್ಯಾಂಕ್ ಘೋಷಣೆಯಷ್ಟೇ ಬಾಕಿ ಇದೆ. ವಿವಿಗೆ 9ನೇ ಸ್ಥಾನದಲ್ಲಿರುವ ಹಿನ್ನೆಲೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿತ್ಯ ಅವರನ್ನು ಸನ್ಮಾನಿಸಲಾಯಿತು.
ಹುಟ್ಟಿನಿಂದ ಮಾಂಸಖಂಡಗಳ ಬಲಹೀನತೆಯ ಸ್ಥಿತಿಯೊಂದಿಗೆ ಇನ್ನೊಬ್ಬರನ್ನು ಅವಲಂಬಿಸಿಯೇ ತನ್ನ ನಿತ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಆದಿತ್ಯ, ಉತ್ತಮ ಅಂಕ ಗಳಿಸಿರುವುದು ಇತರ ಯುವಕರಿಗೆ ಮಾದರಿ. ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮಾಣಿ ಬಾಲವಿಕಾಸ ಶಾಲೆಯಲ್ಲಿ ಮಾಡಿದ ಬಳಿಕ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡರು. ಪದವಿಯಲ್ಲಿ ಬಿ.ಕಾಂ ಓದಿದ ಆದಿತ್ಯ, ಅಕೌಂಟೆನ್ಸಿಯಲ್ಲಿ ಆರು ಸೆಮಿಸ್ಟರ್ಗಳಲ್ಲಿ ಶೇ. 100 ಅಂಕ ಗಳಿಸಿದ್ದಾರೆ.
ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ತನ್ನ ಕ್ರೀಡೋತ್ಸವಕ್ಕೆ ಪ್ರಸಿದ್ಧಿ. ಅದರಲ್ಲಿಯೂ ಪಾಲ್ಗೊಂಡಿರುವ ಆದಿತ್ಯ ಅಲ್ಲಿ ಕೂಡ ತನ್ನ ಛಾಪು ಮೂಡಿಸಿದ್ದಾರೆ. ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.96.4 ಅಂಕ ಹಾಗೂ ಪಿಯುಸಿಯಲ್ಲಿ ಶೇ. 96 ಅಂಕ ಗಳಿಸಿದ್ದರು.
ಸಹಪಾಠಿಗಳು, ಶಿಕ್ಷಕರ ಅಕ್ಕರೆ:ಕಲ್ಲಡ್ಕ ಸಮೀಪ ಮಾಣಿ ಸನಿಹದ ಸೂರಿಕುಮೇರು ಬಳಿಯ ಕೃಷಿಕ ಗಣೇಶ್ ಭಟ್ ಹಾಗೂ ಉಷಾ ದಂಪತಿಯ ಮೊದಲ ಪುತ್ರ ಆದಿತ್ಯ. ತಾನು ಎಲ್ಲರಂತಿಲ್ಲ, ವ್ಹೀಲ್ ಚೇರ್ನಲ್ಲಿ ಓಡಾಡಬೇಕೆಂದು ಧೃತಿಗೆಡಲಿಲ್ಲ. ಎಳವೆಯಿಂದಲೇ ದೇಹದ ಮಾಂಸಖಂಡಗಳು ಕ್ಷೀಣಿಸುವ ಸಮಸ್ಯೆ ಇರುವ ಹಿನ್ನೆಲೆ ಪ್ರತಿಯೊಂದಕ್ಕೂ ಅವಲಂಬಿತನಾಗಬೇಕಲ್ಲ ಎಂದು ಸುಮ್ಮನೆ ಕೂರಲಿಲ್ಲ.