ಬಂಟ್ವಾಳ: ವಿಟ್ಲದ ಕೊಳ್ನಾಡು ಗ್ರಾಮದ ರಾಜ್ಯ ಹೆದ್ದಾರಿ 101ರಲ್ಲಿ ಹಾದು ಹೋಗುವ ಕರೈ ಎಂಬಲ್ಲಿ ಮಂಗಳವಾರ ಬೀಸಿದ ಜೋರು ಗಾಳಿ ಮಳೆಗೆ ಹಲವಾರು ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿವೆ. ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಟ ಅನುಭವಿಸಬೇಕಾಯಿತು.
ಭಾರಿ ಗಾಳಿ, ಮಳೆ: ವಿಟ್ಲದ ಕೊಳ್ನಾಡು ಗ್ರಾಮದ ರಾಜ್ಯ ಹೆದ್ದಾರಿ 101ರಲ್ಲಿ ಸಂಚಾರ ಅಸ್ತವ್ಯಸ್ತ - ರಾಜ್ಯ ಹೆದ್ದಾರಿ 101ರಲ್ಲಿ ಸಂಚಾರ ಅಸ್ತವ್ಯಸ್ತ
ಭಾರಿ ಗಾಳಿ ಸಹಿತ ಮಳೆಗೆ ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿಟ್ಲದ ಕೊಳ್ನಾಡು ಗ್ರಾಮದ ರಾಜ್ಯ ಹೆದ್ದಾರಿ 101ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳೀಯರ ಸಹಕಾರದಿಂದ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸೋಮವಾರ ಸಂಜೆಯಿಂದಲೇ ಬಿರುಸಿನ ಮಳೆ, ಗಾಳಿ ಇತ್ತು. ಇದರಿಂದ ರಸ್ತೆ ಬದಿಯಲ್ಲಿರುವ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿವೆ. ಈ ಘಟನೆಯಲ್ಲಿ ಏಳು ವಿದ್ಯುತ್ ಕಂಬಗಳು ಧರೆಗುರುಳಿದವು. ವಿಟ್ಲದಿಂದ ಸಾಲೆತ್ತೂರು, ಮುಡಿಪು, ದೇರಳಕಟ್ಟೆ ಕಡೆಗಳಿಗೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತವು. ಕೂಡಲೇ ಕಾರ್ಯಪ್ರವೃತ್ತರಾದ ಊರಿನ ನಾಗರಿಕರು, ಮರ ತುಂಡರಿಸುವ ಯಂತ್ರಗಳೊಂದಿಗೆ ಆಗಮಿಸಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಬಳಿಕ ಸುಗಮ ವಾಹನ ಸಂಚಾರಕ್ಕೆ ನೆರವಾದರು.
ಸಾಮಾಜಿಕ ಕಾರ್ಯಕರ್ತ ಹೆಚ್.ಎಂ. ಖಾಲೀದ್ ಕೊಳ್ನಾಡು, ಅರೀಪ್ ಕರೈ, ಆಸೀಫ್ ಕರೈ, ಕರೀಂ ಬುರಾಕ್, ಸಂಶುದ್ದೀನ್, ಮುಸ್ತಫಾ, ರಝಕ್, ಅಸೀಕ್, ಹ್ಯಾರೀಶ್, ನಬಾಸ್ ಮೊದಲಾದವರು ಮರ ತೆರವುಗೊಳಿಸಿ, ಮೆಸ್ಕಾಂ ಶಾಖಾ ಅಧಿಕಾರಿ ಪ್ರಸನ್ನ ಮತ್ತು ಸಿಬ್ಬಂದಿ ಜತೆ ಕೈಜೋಡಿಸಿದ್ದರು.