ಪುತ್ತೂರು: ಸಾಲ ಮರುಪಾವತಿಸದ್ದಕ್ಕೆ ಮನೆ ಮುಟ್ಟಗೋಲು ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಸಮ್ಮುಖದಲ್ಲೇ ಮನೆ ಮಾಲೀಕನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮೃತಳ ಪತಿ ಬ್ಯಾಂಕ್ ಆಧಿಕಾರಿಗಳ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರಘವೀರ್ ಪ್ರಭು, ಸಾಲದ ಹಣ ಮರುಪಾವತಿಗೆ ಒನ್ ಟೈಮ್ ಸೆಟಲ್ಮೆಂಟ್ಗೆ ಬ್ಯಾಂಕ್ ಯಾವುದೇ ಅವಕಾಶವನ್ನು ನೀಡಿಲ್ಲ, ಮನೆ ಜಪ್ತಿಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಿಳೆಯ ಪತಿ ರಘವೀರ್ ಪ್ರಭು ಆರೋಪಿಸಿದರು. ವ್ಯವಹಾರಕ್ಕೆ ಸಂಬಂಧಿಸಿದಂತೆ 2007 ರಲ್ಲಿ ಪುತ್ತೂರಿನ ಖಾಸಗಿ ಬ್ಯಾಂಕ್ನಿಂದ 6 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. 3 ಕೋಟಿ ರೂಪಾಯಿ ಮರುಪಾವತಿಯನ್ನೂ ಮಾಡಲಾಗಿತ್ತು. ಬಳಿಕ ವ್ಯವಹಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ ಕಾರಣ ಬ್ಯಾಂಕ್ ಸಾಲವನ್ನು ತುಂಬಲಾಗಿಲ್ಲ. ಬ್ಯಾಂಕ್ ಸಾಲ ಪಡೆಯಲು ಮಕ್ಕಳು ಹಕ್ಕು ಹೊಂದಿದ್ದ ಮನೆ ಸೇರಿದಂತೆ ತನ್ನ ಮಾಲೀಕತ್ವದ ಕಟ್ಟಡ ಮತ್ತು ಖಾಲಿ ಜಾಗವನ್ನೂ ಅಡಮಾನವಾಗಿ ಇಡಲಾಗಿತ್ತು. ವ್ಯವಹಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ ಕಾರಣಕ್ಕಾಗಿ ಸುಮಾರು 11 ವರ್ಷಗಳ ಕಾಲ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎಂದರು.
ಈ ನಡುವೆಯೇ ಬ್ಯಾಂಕ್ ತನ್ನ ಅಕೌಂಟ್ ಅನ್ನು ಎನ್.ಪಿ.ಎ ಮಾಡಿದ ಕಾರಣ ಬ್ಯಾಂಕ್ ಜೊತೆಗೆ ಯಾವುದೇ ವ್ಯವಹಾರ ಮಾಡದಂತೆಯೂ ಮಾಡಲಾಗಿತ್ತು. ಸಾಲಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಬ್ಯಾಂಕ್ ಸಿಬ್ಬಂದಿ ಸಂಪರ್ಕಿಸಿ ಸೆಟಲ್ಮೆಂಟ್ ಮಾಡಲು ಒತ್ತಾಯ ಮಾಡಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ನೀಡದೆ ಕೇವಲ ಕಾನೂನು ಮೂಲಕವೇ ಸಾಲವನ್ನು ವಸೂಲಿ ಮಾಡುವುದಾಗಿ ಮೊಂಡು ವಾದವನ್ನು ಬ್ಯಾಂಕ್ ಮಾಡಿತ್ತು ಎಂದು ಆರೋಪಿಸಿದರು.