ಪುತ್ತೂರು :ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಜೋಡಿ ಎಂಬಲ್ಲಿ ಅಕ್ರಮ ಸ್ಫೋಟಕ ತಯಾರಿಕಾ ಘಟಕ ಪತ್ತೆಯಾಗಿದ್ದು, ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಎಸ್ಡಿಪಿಐ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ.ಸಿದ್ದಿಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಸ್ಫೋಟಕ ತಯಾರಿಕಾ ಘಟಕವನ್ನು ಪತ್ತೆ ಮಾಡಿರುವ ಸಂಪ್ಯ ಪೊಲೀಸರು ಕೇರಳ ಹಾಗು ತಮಿಳುನಾಡಿನ ತಲಾ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ತೋಟದ ಮಾಲೀಕ ಹಾಗೂ ಸ್ಥಳೀಯರು ಸಹಕರಿಸಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಮುಂದಿನ 10 ದಿನದೊಳಗೆ ಬಂಧಿಸುವ ಕೆಲಸ ಆಗಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ಕೆರಳ ಗಡಿಪ್ರದೇಶದಲ್ಲಿ ಈಗಾಗಲೇ ಪ್ರಕ್ಷುಬ್ಧ ಪರಿಸ್ಥಿತಿಯಿದ್ದು, ಸ್ಫೋಟಕ ತಯಾರಿಕಾ ಘಟಕದ ಪತ್ತೆಯಿಂದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಅಲ್ಲದೆ ಬಂಧಿತ ಆರೋಪಿ ಬಾಂಬ್ ಸ್ಫೋಟ ಪ್ರಕರಣವೊಂದರ ಆರೋಪಿ ಎಂಬ ಸುದ್ದಿ ಹರಡಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮತ್ತು ತೋಟದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.