ಮಂಗಳೂರು:ಮದುವೆ ಆಗುವುದಾಗಿ ನಂಬಿಸಿ, ಪ್ರೀತಿ ಪ್ರೇಮದ ನಾಟಕವಾಡಿ ಯುವತಿಗೆ ಮಗು ಕರುಣಿಸಿದ ಯುವಕನೋರ್ವನ ಮೇಲಿನ ಅತ್ಯಾಚಾರದ ಆರೋಪ ಇಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಮಂಗಳೂರು ಹೊರವಲಯದ ಪಕ್ಷಿಕೆರೆ ಅತ್ತೂರು ಗ್ರಾಮದ ಕೆಮ್ರಾಲ್ ಗ್ರಾಮದ ಅಜಿತ್ ಶೆಟ್ಟಿ (27) ಎಂಬಾತ ಕೆಂಚಗುಡ್ಡೆಯ ತೆಂಕ ಎಕ್ಕಾರು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ.
ಆರೋಪಿ ಅಜಿತ್ ಶೆಟ್ಟಿ 2014ರ ಸೆಪ್ಟೆಂಬರ್ 4ರಂದು ಯಾರೂ ಇಲ್ಲದ ವೇಳೆ ಯುವತಿಯ ಮನೆಗೆ ಬಂದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದನು. ಬಳಿಕ ಆಕೆಯನ್ನು ನಿರಂತರವಾಗಿ ಲೈಂಗಿಕ ಬಯಕೆಗೆ ಬಳಸಿಕೊಂಡಿದ್ದ. ಪರಿಣಾಮ 2015ರ ಮೇ.29 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್.ಒ.ಎಂ ಕ್ರಾಸ್ತ ಅಜಿತ್ ಶೆಟ್ಟಿ ಮದುವೆಯಾಗದೇ ಮೋಸ ಮಾಡಿರುವ ಕಾರಣ ಅದೇ ವರ್ಷ ಜುಲೈ 22ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದೂರು ನೀಡಿದ್ದಳು. ಬಳಿಕ ಅಜಿತ್ ಯುವತಿಯನ್ನು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ, ಆಕೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗದೇ ಆಕೆ ಮತ್ತು ಮಗುವನ್ನು ನಿರ್ಲಕ್ಷ್ಯ ವಹಿಸಿದ್ದ.
ಬಜಪೆ ಠಾಣೆಯ ತನಿಖಾಧಿಕಾರಿ ಟಿ.ಡಿ.ನಾಗರಾಜ್ ಈ ಪ್ರಕರಣ ಕೈಗೆತ್ತಿಕೊಂಡು ಚಾರ್ಜ್ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಂತ್ರಸ್ತ ಯುವತಿ, ಮಗು ಹಾಗೂ ಆರೋಪಿಯ ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ಜೈವಿಕ ತಂದೆ ಎಂಬುವುದು ರುಜುವಾತಾಗಿದೆ.
ಎಲ್ಲ ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಲಯ, ಯುವತಿಯನ್ನು ಅತ್ಯಾಚಾರ ಹಾಗೂ ಮದುವೆ ಆಗುವುದಾಗಿ ನಂಬಿಸಿರುವುದು ಸಾಬೀತಾದ ಹಿನ್ನೆಲೆ ಆರೋಪಿಗೆ ಅಜಿತ್ ಶೆಟ್ಟಿ ದೋಷಿ ಎಂದು ನ್ಯಾಯಾಧೀಶೆ ಸೈದುನ್ನೀಸಾ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 17ಕ್ಕೆ ಕಾಯ್ದಿರಿಸಿದ್ದಾರೆ. ಪಬ್ಲಿಕ್ಪ್ರಾಸಿಕ್ಯೂಟರ್ ಜುಡಿತ್.ಒ.ಎಂ ಕ್ರಾಸ್ತ ವಾದ ಮಂಡಿಸಿದ್ದರು.