ಮಂಗಳೂರು: ಮೆಸ್ಕಾಂ ನಿರಂತರವಾಗಿ ವರ್ಷಕ್ಕೆ ನಾಲ್ಕೈದು ಬಾರಿ ವಿದ್ಯುತ್ ದರ ಹೆಚ್ಚಳ ಮಾಡುತ್ತಿದ್ದು, ವಿಪರೀತ ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಇಂದು ಬೆಳಗ್ಗೆ ನಗರದ ಬಿಜೈನಲ್ಲಿರುವ ಮೆಸ್ಕಾಂನ ಪ್ರಧಾನ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು, ಇಂದು ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರ ಜೊತೆಗೆ ರಾಜ್ಯದ ಜನತೆಗೆ ವಿಪರೀತವಾಗಿ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊಡುತ್ತಿಲ್ಲ. ವರ್ಷಕ್ಕೆ ನಾಲ್ಕೈದು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಬರುತ್ತಿದ್ದ ವಿದ್ಯುತ್ ದರಕ್ಕೂ, ಈಗ ಬರುತ್ತಿರುವ ವಿದ್ಯುತ್ ದರಕ್ಕೂ ತುಂಬಾ ವ್ಯತ್ಯಾಸವಿದೆ. ಇದರಿಂದ ಜನಸಾಮಾನ್ಯರು ಮಾತ್ರವಲ್ಲ ಎಲ್ಲಾ ವಿಭಾಗದ ಮಂದಿ ಕಂಗೆಟ್ಟಿದ್ದಾರೆ ಎಂದರು.