ಮಂಗಳೂರು :ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆಯ ಆಧಾರದಲ್ಲಿ ಮಂಗಳೂರಿನ ನಾಲ್ವರು ಕುಟುಂಬಿಕರನ್ನೇ ಹತ್ಯೆ ಮಾಡಿದ ಅಪರಾಧಿಗೆ ಬಿಡುಗಡೆ ಭಾಗ್ಯ ಸುದ್ದಿ ಅವರ ಕುಟುಂಬಸ್ಥರಲ್ಲೇ ಆತಂಕ ಸೃಷ್ಟಿಸಿದೆ. ದಯವಿಟ್ಟು ಬಿಡುಗಡೆ ಮಾಡಬೇಡಿ ಅಂತ ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿ ಪ್ರವೀಣ್ ಎಂಬಾತ ಕುಟುಂಬಿಕರನ್ನು ಕೊಲೆ ಮಾಡಿ ಜೈಲು ಸೇರಿದವನು.
ಈತ 1994 ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ (75) ಅವರ ಪುತ್ರಿ ಶಕುಂತಲಾ (36), ಪುತ್ರ ಗೋವಿಂದ (30) ಮೊಮ್ಮಗಳು ದೀಪಿಕಾ(9)ರನ್ನು ಕೊಲೆಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು.
ಹತ್ಯೆಯಾದ ಕುಟುಂಬ ಸದಸ್ಯರಿಂದ ಮನವಿ : ಪ್ರವೀಣ್ ಕುಮಾರ್ ಬಳ್ಳಾರಿ ಜೈಲಿನಲ್ಲಿದ್ದು, ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸಂತ್ರಸ್ತ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ಆತಂಕಗೊಂಡಿರುವ ಮನೆಯವರು ಆತನನ್ನು ಬಿಡುಗಡೆ ಮಾಡಬೇಡಿ ಎಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಹಂತಕ ಪ್ರವೀಣ್ ಕುಮಾರ್ ಪತ್ನಿ ಅನಸೂಯಾ ಅವರು ಕೂಡ ಆತನ ಬಿಡುಗಡೆ ಮಾಡಬಾರದೆಂದು ಕಮಿಷನರ್ ಅವರಿಗೆ ಮನವಿ ಮಾಡಿದ್ದಾರೆ.
ಕುಟುಂಬಸ್ಥರ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ನಮಗೆ ಸರ್ಕಾರದಿಂದ ಅಥವಾ ಮೇಲಾಧಿಕಾರಿಗಳಿಂದ ಪ್ರವೀಣ್ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಇದೀಗ ಆತನ ಕುಟುಂಬಿಕರು ಆತನನ್ನು ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಿದ್ದಾರೆ. ಆತ ಜೈಲಿನಲ್ಲಿಯೇ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಿದ್ದಾರೆ. ಆತನ ಇಡೀ ಕುಟುಂಬವೇ ಪ್ರವೀಣ್ ಬಿಡುಗಡೆಯನ್ನು ವಿರೋಧಿಸಿ ಮನವಿ ಮಾಡಿದೆ. ಈ ಮನವಿಯನ್ನು ಇಂದೇ ನಾನು ಮೇಲಾಧಿಕಾರಿಗಳಿಗೆ ಕಳುಹಿಸುತ್ತಿದ್ದೇನೆ ಎಂದು ಹೇಳಿದರು.
ಪ್ರಕರಣ ಹಿನ್ನೆಲೆ : ಮೂಲತಃ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದ ಪ್ರವೀಣ್ ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದನು. ಆಗ ಸಿಂಗಲ್ ನಂಬರ್ ಲಾಟರಿ ನಡೆಯುತ್ತಿದ್ದು, ಈತ ಲಾಟರಿ ಟಿಕೆಟ್ ಖರೀದಿಯ ಚಟಕ್ಕೆ ಅಂಟಿಕೊಂಡಿದ್ದನು. ಇದರಿಂದ ಆತ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದು, ಪತ್ನಿ ಮತ್ತು ಇತರ ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡವು ಇರಿಸಿ ಸಾಲವನ್ನೂ ಪಡೆದಿದ್ದನು.
1994 ಫೆಬ್ರವರಿ 23 ರಂದು ಸಂಜೆ ವಾಮಂಜೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ರಾತ್ರಿ ಮಲಗಿದ್ದ ಪ್ರವೀಣ್ ಮಧ್ಯರಾತ್ರಿ ಎದ್ದು ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕಿ ಸೇರಿದಂತೆ ನಾಲ್ಕು ಮಂದಿಯನ್ನು ಹಾರೆಯ ಹಿಡಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದನು. ಹತ್ಯೆ ಮಾಡಿ ಮನೆ ಮಂದಿಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಈತನನ್ನು ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.