ಸುಳ್ಯ (ದಕ್ಷಿಣ ಕನ್ನಡ):ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಗುರುವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಗಳಾದ ನೌಫಲ್ (28), ಸೈನುಲ್ ಆಬಿದ್ (22), ಮೊಹಮ್ಮದ್ ಸೈಯದ್ (32), ಅಬ್ದುಲ್ ಬಶೀರ್ (29) ಮತ್ತು ರಿಯಾಜ್ (27) ಅವರನ್ನು ಎನ್‌ಐಎ ಆರು ದಿನಗಳ ಕಾಲ (ಆ.23ರ ವರೆಗೆ) ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಅವರನ್ನು ರಸ್ತೆಯಲ್ಲಿ ಭೀಕರವಾಗಿ ಆರೋಪಿಗಳು ಹತ್ಯೆ ಮಾಡಿದ್ದರು. ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ಳಾರೆ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಎನ್‌ಐಎ ಅಧಿಕಾರಿಗಳು, ಗುರುವಾರ ಐವರು ಆರೋಪಿಗಳನ್ನು ಆರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಐವರು ಆರೋಪಿಗಳು ಮಂಗಳೂರು ಜೈಲಿನಲ್ಲಿದ್ದು, ಅಲ್ಲಿಂದಲೇ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆ ಚುರುಕುಗೊಳಿಸಿದ ಎನ್‌ಐಎ:ಆರೋಪಿಗಳು ಹತ್ಯೆ ಮಾಡಿದ ಬಳಿಕ ಕೇರಳದ ಕಾಸರಗೋಡು ವಿನ ಬೇಕಲ ರೋಡ್ನಲ್ಲಿರುವ ಮಾಲಿಕುದ್ದೀನ್ ಮಸೀದಿಯಲ್ಲಿ ತಂಗಿದ್ದರು. ಆ ಬಳಿಕ ಅವರು ಎಲ್ಲಿಗೆ ಹೋಗಿದ್ದರು ಎಂಬುದನ್ನು ತನಿಖೆ ಮಾಡಬೇಕಾಗಿದೆ. ಎಲ್ಲೆಲ್ಲಿ ಬಚ್ಚಿಟ್ಟುಕೊಂಡಿದ್ದರು, ಅವರಿಗೆ ಯಾರು ಆಶ್ರಯ ನೀಡಿದರು, ಯಾವ ಉದ್ದೇಶಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಶಫೀಕ್ ಎಂಬಾತನ ತಂದೆ ಇಬ್ರಾಹಿಂ ಅವರು ಪ್ರವೀಣ್ ನೆಟ್ಟಾರು ಅವರ ಚಿಕನ್ ಶಾಪ್ನಲ್ಲಿ ಹಿಂದೆ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.