ಮಂಗಳೂರು:ಇಲ್ಲಿನ ನೆಹರು ಮೈದಾನದ ಬಳಿ ಬಿಹಾರ ಮೂಲದ ವ್ಯಕ್ತಿಯ ಮೊಬೈಲ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಸಿನಿಮೀಯ ಸ್ಟೈಲ್ನಲ್ಲಿ ಚೇಸಿಂಗ್ ಮಂಗಳೂರಿನ ಹರೀಶ್ ಪೂಜಾರಿ (32), ಅತ್ತಾವರದ ಶಮಂತ್ (20) ಬಂಧಿತರು. ಆರೋಪಿಗಳು ಬುಧವಾರ ಮಧ್ಯಾಹ್ನದ ವೇಳೆ ನೆಹರು ಮೈದಾನದ ಬಳಿ ಬಿಹಾರ ಮೂಲದ ವ್ಯಕ್ತಿಯ ಮೊಬೈಲ್ ಮತ್ತು ಇತರ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತ ಕೂಗಿದಾಗ ಅಲ್ಲಿಯೇ ಇದ್ದ ಪೊಲೀಸರು ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನಟ್ಟಿ ಓರ್ವನನ್ನು ಹಿಡಿದಿದ್ದಾರೆ.
ಬಳಿಕ ಕಳ್ಳನನ್ನು ಬಂಧಿಸಿ, ಆತನ ಬಳಿ ಇದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪರಾರಿಯಾಗಿದ್ದ ಇನ್ನಿಬ್ಬರ ಸೆರೆಗೆ ಬಂಧಿತ ಕಳ್ಳನಿಂದ ಫೋನ್ ಮಾಡಿಸಿದ್ದಾರೆ. ಹೇಳಿದ ಸ್ಥಳಕ್ಕೆ ಬಂದ ಕಳ್ಳನನ್ನು ಹಿಡಿಯಲು ಹೋದಾಗ ಆ ವ್ಯಕ್ತಿ ಪೊಲೀಸರನ್ನೇ ದೂಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಅವನ್ನೂ ಬೆನ್ನಟ್ಟಿ ಹಿಡಿದಿದ್ದಾರೆ.
ಇನ್ನೊಬ್ಬ ಆರೋಪಿ ರಾಜೇಶ್ ಎಂಬಾತ ಪರಾರಿಯಾಗಿದ್ದು, ಈತನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕಳ್ಳರು ತಂಡ ರಚಿಸಿಕೊಂಡು ಮೊಬೈಲ್ ಮತ್ತು ಇತರ ವಸ್ತುಗಳನ್ನು ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಬೆಂಗಳೂರು ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ!