ಕರ್ನಾಟಕ

karnataka

ETV Bharat / city

ಮಂಗಳೂರಿನಲ್ಲಿ ನಿತ್ಯವೂ ಗಾಂಧಿ ಮೂರ್ತಿಗೆ ಪೂಜೆ: ಜಯಂತಿ ನಿಮಿತ್ತ ಇಂದು ಭಜನಾ ಕಾರ್ಯಕ್ರಮ - gandhi jayanti

ಮಂಗಳೂರಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ಕರಾವಳಿಯ ವೀರ ಪುರುಷರಾದ ಕೋಟಿ ಚೆನ್ನಯ್ಯರ ಆರಾಧನೆ ನಡೆಯುತ್ತದೆ. ಜೊತೆಗೆ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಸಹ ದೇವರಂತೆಯೇ ಪೂಜಿಸುವುದು ಇಲ್ಲಿನ ವಿಶೇಷ.

people worshiping gandhi at mangalore
ಗಾಂಧಿ ಮೂರ್ತಿಗೆ ಪೂಜೆ

By

Published : Oct 2, 2021, 1:09 PM IST

ಮಂಗಳೂರು: ದೇಶದೆಲ್ಲೆಡೆ ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಈ ಮಹಾನ್ ನಾಯಕನಿಗೆ ಮಂಗಳೂರಿನಲ್ಲಿ ದೇವರ ಸ್ಥಾನ ಕೊಟ್ಟು ದಶಕಗಳಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ಇಂದು ಗಾಂಧಿ ಮೂರ್ತಿಗೆ ವಿಶೇಷ ಪೂಜೆ ಕೂಡ ನಡೆಯುತ್ತಿದೆ.

ಗಾಂಧಿ ಮೂರ್ತಿಗೆ ಪೂಜೆ

ಮಂಗಳೂರಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ಕರಾವಳಿಯ ವೀರ ಪುರುಷರಾದ ಕೋಟಿ ಚೆನ್ನಯ್ಯರ ಆರಾಧನೆ ನಡೆಯುತ್ತದೆ. ಇದರ ಜೊತೆಗೆ ಈ ದೇವಾಲಯದಲ್ಲಿ ವಿವಿಧ ದೇವರುಗಳ ಆರಾಧನೆಯೂ ನಡೆಯುತ್ತದೆ. ಈ ವೀರಪುರುಷರ ಆರಾಧನೆ ಜೊತೆಗೆ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಸಹ ಪೂಜಿಸುವುದು ಇಲ್ಲಿನ ವಿಶೇಷ.

ಮೂರು ಹೊತ್ತಿನ ಪೂಜೆ :

ಈ ಕ್ಷೇತ್ರದಲ್ಲಿ ಗಾಂಧೀಜಿ ಅವರ ಮೂರ್ತಿಯನ್ನು ಮಹಾತ್ಮ ಗಾಂಧೀಜಿ‌ ಮಂದಿರದಲ್ಲಿ ಇರಿಸಿ ಪೂಜಿಸಲಾಗುತ್ತಿದೆ. ಹಲವು ದಶಕಗಳ ಹಿಂದೆ ಇಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿಯನ್ನು ಅಂದಿನ ಆಡಳಿತ ಮಂಡಳಿ ಪ್ರತಿಷ್ಠಾಪಿಸಿತ್ತು. ಈ ಮೂರ್ತಿಗೆ ಅಂದಿನಿಂದ ನಿತ್ಯ ಮೂರು ಹೊತ್ತಿನ ಪೂಜೆ ನಡೆಯುತ್ತಿದೆ.

ಈ ದೇವಸ್ಥಾನದಲ್ಲಿ ಇರುವ ದೇವರ ಮೂರ್ತಿಗಳಿಗೆ ನಿತ್ಯ ಮೂರು ಬಾರಿ ಪೂಜಿಸಲಾಗುತ್ತದೆ. ಮೂರು ಬಾರಿಯೂ ಗಾಂಧೀಜಿ ಮೂರ್ತಿಗೂ ಪೂಜೆ ನಡೆಯುತ್ತದೆ. ಗಾಂಧೀಜಿ ಅವರ ಮೂರ್ತಿಗೆ ಬಾಳೆಹಣ್ಣು, ಹಾಲು ಇಟ್ಟು ಆರತಿ ಮಾಡಿ ನಿತ್ಯ ಪೂಜಿಸಲಾಗುತ್ತದೆ.

ಇದನ್ನೂ ಓದಿ:ಖಾದಿ ಎಂಪೋರಿಯಂಗೆ ಬೊಮ್ಮಾಯಿ ಭೇಟಿ: ಪತ್ನಿಗೆ ಸಿಲ್ಕ್ ಸೀರೆ ಖರೀದಿಸಿದ ಸಿಎಂ.. ಬೆಲೆ ಎಷ್ಟು ಗೊತ್ತಾ?

ಗಾಂಧಿ ಜಯಂತಿಯ ಪ್ರಯುಕ್ತ ಇಂದು ಈ ದೇವಸ್ಥಾನದಲ್ಲಿ ಇರುವ ಎಲ್ಲ ದೇವರ ಮೂರ್ತಿಗಳಿಗೂ ವಿಶೇಷ ಪೂಜೆ ನಡೆಯಲಿದ್ದು, ಬಲಿ ಉತ್ಸವ ನಡೆಯುತ್ತದೆ. ಗಾಂಧಿ ಜಯಂತಿ ಪ್ರಯುಕ್ತ ಅವರ ಅನುಯಾಯಿಗಳು ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಗಾಂಧೀಜಿ ಮೂರ್ತಿ ಮುಂಭಾಗದಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮತ್ತು ‌ಮಹಿಳಾ ಕಾಂಗ್ರೆಸ್ ನಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ABOUT THE AUTHOR

...view details