ದಕ್ಷಿಣ ಕನ್ನಡ:ಜಿಲ್ಲೆಯ ಪುತ್ತೂರಿನ ಭಕ್ತಕೋಡಿ ಸರ್ಕಾರಿ ಶಾಲೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇಂದೋ - ನಾಳೆಯೋ ಧರೆಗುರುಳಲು ಸಿದ್ಧವಾಗಿ ನಿಂತ ಕಟ್ಟಡದಲ್ಲೇ ಮಕ್ಕಳು ಪಾಠ ಕೇಳಬೇಕಾದ ಸ್ಥಿತಿಯಿದೆ. ಆದರೆ, ಶಾಲೆಯ ಪರಿಸ್ಥಿತಿ ಬಗ್ಗೆ ಶಿಕ್ಷಣ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಪಾಯಕ್ಕೆ ಆಹ್ವಾನ ನೀಡುವಂತಿರುವ ಪುತ್ತೂರಿನ ಭಕ್ತಕೋಡಿ ಸರ್ಕಾರಿ ಶಾಲೆ: ದುರಸ್ತಿಗೆ ಆಗ್ರಹ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಈ ಶಾಲೆಗೆ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ಜೀವ ಕೈಯಲ್ಲಿ ಹಿಡಿದು ತರಗತಿ ಕೇಳಬೇಕಾದ ಸ್ಥಿತಿಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಈ ಶಾಲೆಯ ದುಃಸ್ಥಿತಿಯನ್ನು ಶಿಕ್ಷಣ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದರೂ, ಯಾರೊಬ್ಬರೂ ಈ ಶಾಲೆಯತ್ತ ಮುಖವೆತ್ತಿ ನೋಡಿಲ್ಲ ಎನ್ನಲಾಗ್ತಿದೆ.
ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ:
53 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರಿನ ಭಕ್ತಕೋಡಿ ಸರ್ಕಾರಿ ಶಾಲೆ ಹಿರಿಯ ಪ್ರಾಥಮಿಕ ಶಾಲೆ ಇದೀಗ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆ ಎಂಬ ಹೆಸರು ಇದಕ್ಕಿದೆ. ಆದರೆ, ಈ ಶಾಲೆಯ ಕಟ್ಟಡ ಮಾತ್ರ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಶಾಲೆಯ ಛಾವಣಿಗೆ ಹಾಕಿದ ಮರದ ರೀಪುಗಳು ಮುರಿದು ಬೀಳುವ ಸಾಧ್ಯತೆಯಿದೆ. ಕಟ್ಟಡದ ನಾಲ್ಕು ಗೋಡಗಳ ನಡುವೆ ಭಾರಿ ಗಾತ್ರದ ಬಿರುಕು ಕಾಣಿಸಿಕೊಂಡಿದ್ದು, ನಾಲ್ಕು ಗೋಡೆಗಳಿಗೂ ಪರಸ್ಪರ ಸಂಬಂಧವೇ ಇಲ್ಲದಂತಾಗಿದೆ. ಈ ಕಟ್ಟಡದಲ್ಲಿ ನಾಲ್ಕು ತರಗತಿಗಳು ನಿತ್ಯ ನಡೆಯುತ್ತಿದ್ದು, ಒಟ್ಟು 130 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.
ಮಳೆಗಾಲದಲ್ಲಿ ಈ ಶಾಲೆಯ ಎಲ್ಲ ತರಗತಿಯಲ್ಲಿ ಮಳೆ ನೀರು ಸೋರುವ ಕಾರಣ ತರಗತಿಯಲ್ಲಿ ಮಕ್ಕಳ ಜೊತೆಗೆ ಛಾವಣಿಯಿಂದ ಬೀಳುವ ನೀರು ಸಂಗ್ರಹಿಸಲು ದೊಡ್ಡ ಗಾತ್ರದ ಪಾತ್ರೆಗಳನ್ನು ಇಡಬೇಕಾಗುತ್ತದೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.
ಶಾಲೆಯ ದುಃಸ್ಥಿತಿಯ ಬಗ್ಗೆ ಸಾರ್ವಜನಿಕರು ಈಗಾಗಲೇ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಆ ಮೂಲಕ ಶಾಸಕರ ಗಮನಕ್ಕೂ ತಂದಿದ್ದಾರೆ. ಕಳೆದ 4 ವರ್ಷಗಳಿಂದ ಈ ಶಾಲೆಯ ದುಃಸ್ಥಿತಿ ಮತ್ತಷ್ಟು ಹೆಚ್ಚಾಗಿದ್ದು, ಪುಟ್ಟ ಮಕ್ಕಳನ್ನು ಸೇರಿಸಿ ತರಗತಿ ಮಾಡುವುದಾದರೂ ಹೇಗೆ ಎಂದು ಶಾಲೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ದುಃಸ್ಥಿತಿಯಲ್ಲಿರುವ ಈ ಕಟ್ಟಡದಲ್ಲಿ ಅನಾಹುತ ಸಂಭವಿಸಿದಲ್ಲಿ ನೂರಾರು ಮಕ್ಕಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕಿದೆ.
ಇದನ್ನೂ ಓದಿ:ಕೊರಗಜ್ಜನ ವೇಷ ಹಾಕಿ ವಿಕೃತಿ ಮೆರೆದ ವರ: ಆರೋಪಿಗಳ ವಿರುದ್ಧ ದೂರು ದಾಖಲು