ಬಂಟ್ವಾಳ:ವೃದ್ಧ ಭಿಕ್ಷುಕಿಯೊಬ್ಬರು ದೇವರಿಗೆ ದೇಣಿಗೆ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ. ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಇವರು ಕಳೆದ ಹಲವು ವರ್ಷಗಳಿಂದ ದೇವರಿಗೆ ಕಾಣಿಕೆಯಾಗಿ ನೀಡುತ್ತಾ ಹೃದಯ ಶ್ರೀಮಂತಿಕೆ ಮೆರೆಯುತ್ತಿದ್ದಾರೆ. ಇದೀಗ ಒಂದು ಲಕ್ಷ ರೂಪಾಯಿ ಹಣವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ.
ಈ ವೃದ್ಧ ಮಹಿಳೆಯ ಹೆಸರು ಅಶ್ವತ್ತಮ್ಮ(80). ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರುವ ಇವರು 'ಭವತೀ ಭಿಕ್ಷಾಂದೇಹಿ' ಎಂಬ ಧ್ಯೇಯವನ್ನಿಟ್ಟುಕೊಂಡು ದೇಗುಲದ ವಠಾರದಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಅದರಿಂದ ಬಂದ ಹಣವನ್ನು ಇದೀಗ ದೇವಳದ ಅನ್ನದಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ವರ್ಷದ ಬಹುತೇಕ ಸಮಯ ಮಾಲಾಧಾರಿ ಆಗಿದ್ದುಕೊಂಡೇ ಅಯ್ಯಪ್ಪ ಸೇವೆ ಮಾಡುತ್ತಿರುವ ಇವರು, ತಮ್ಮ ಕುಟುಂಬದಲ್ಲಿ ಬಡತನವಿದ್ದರೂ ಅದರ ಬಗ್ಗೆ ಚಿಂತೆ ಮಾಡಿದವರಲ್ಲ. ನಿತ್ಯ ದೇವರ ನಾಮಸ್ಮರಣೆಯೊಂದಿಗೆ ಬದುಕುತ್ತಿದ್ದು, ಸದಾ ಧಾರ್ಮಿಕ ಪ್ರಜ್ಞೆಯನ್ನು ತನ್ನೊಳಗೆ ಜೀವಂತವಾಗಿರಿಸಿಕೊಂಡಿದ್ದಾರೆ.
ಪೊಳಲಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಸೇರಿದಂತೆ ಇತರ ಸಮಯದಲ್ಲಿ ಕ್ಷೇತ್ರದಲ್ಲಿ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಶುಕ್ರವಾರ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದರು.