ಮಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎನ್ಎಸ್ಯುಐನಿಂದ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಎನ್ಎಸ್ಯುಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ಜಾಮಿಯಾ ವಿವಿಯಲ್ಲಿ ವಿದ್ಯಾರ್ಥಿಗಳು ನ್ಯಾಯಯುತ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದಾಗ ದೆಹಲಿ ಪೊಲೀಸರು ಅವರ ಮೇಲೆ ದೌರ್ಜನ್ಯ ನಡೆಸಿದರು. ಇದನ್ನು ನಾವು ಖಂಡಿಸುತ್ತೇವೆ. ಹಾಗೆಯೇ ಕೇಂದ್ರದ ಎನ್ಆರ್ಸಿ ಹಾಗೂ ಸಿಎಬಿ ಜಾರಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಎನ್ಎಸ್ಯುಐ ಪ್ರತಿಭಟನೆ.. ಜಿಲ್ಲಾಧ್ಯಕ್ಷ ಅಬ್ದುಲ್ಲಾ ಮಾತನಾಡಿ, ಬಹಳಷ್ಟು ಬಡವರಿರುವ ಈ ದೇಶದಲ್ಲಿ ಎಷ್ಟೋ ಮಂದಿಗೆ ಆಧಾರ್ ಕಾರ್ಡ್, ಮತದಾನ ಚೀಟಿಯೇ ಇಲ್ಲ. ಅಂತಹದರಲ್ಲಿ ಪೌರತ್ವದ ದಾಖಲೆ ಎಲ್ಲಿರಬಹುದು. ಇನ್ನೂ ಕಾಯ್ದೆಯನ್ನು ಜಾರಿಗೊಳಿಸುವುದೊಂದೇ ಬಾಕಿ. ಮುಸ್ಲಿಮೇತರರಿಗೆ ಪೌರತ್ವ ನೀಡಿರುವುದರಿಂದ ನಮಗೇನೂ ತೊಂದರೆ ಇಲ್ಲ. ಆದರೆ, ಮುಸ್ಲಿಮರಿಗೆ ಯಾಕೆ ಈ ದೇಶದ ಪೌರತ್ವ ನೀಡಲಿಲ್ಲ ಎಂಬುದೇ ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾಯ್ದೆ ಜಾರಿಯಾದರೆ ಹಿಂದೂ-ಮುಸ್ಲಿಂ ಸಂಘರ್ಷವಾಗಲಿದೆ ಎಂಬುದು ಮೋದಿ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಈ ಸಂಘರ್ಷ ನಡೆಯಬೇಕೆನ್ನುವುದೇ ಅವರ ಉದ್ದೇಶ. ಅಮಿತ್ ಶಾ ಹಾಗೂ ಮೋದಿಯಂತಹ ಡೈನೋಸಾರ್ಗಳನ್ನು ನಾಶಗೊಳಿಸಬೇಕಾಗಿದೆ ಎಂದು ಆರೋಪಿಸಿದರು.