ಮಂಗಳೂರು (ದಕ್ಷಿಣ ಕನ್ನಡ) : ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಸರಕಾರದ ವೈಫಲ್ಯವನ್ನು ಮರೆಮಾಚಲು ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಲಾಗಿದೆ. ಇದು ರಾಜಕೀಯ ಪ್ರೇರಿತ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕವಾಗಿ ಇದ್ದ ಅಭಿಪ್ರಾಯವನ್ನೇ ಇಲ್ಲಿ ಮಾತನಾಡಿದ್ದಾರೆ.
ಕಾಂಗ್ರೆಸ್ ಇಂತಹ ನೋಟಿಸ್‌ಗಳಿಗೆ ಜಗ್ಗುವುದಿಲ್ಲ. ಖರ್ಗೆಗೆ ನೋಟಿಸ್ ನೀಡಿದವರು ಪಿಎಸ್ಐ ನೇಮಕಾತಿ ಮುಖ್ಯಸ್ಥರಿಗೆ ಯಾಕೆ ನೋಟಿಸ್ ನೀಡಿಲ್ಲ. ಸರಕಾರದ ವಿರುದ್ಧ ಮಾತನಾಡಬಾರದೆನ್ನುವ ಧೋರಣೆ ಸರಿಯಲ್ಲ. ಈ ಅಕ್ರಮದ ಬಗ್ಗೆ ಪೊಲೀಸ್ ಇಲಾಖೆಯವರು ತನಿಖೆ ಮಾಡುತ್ತಿರುವುದು ಸರಿಯಿಲ್ಲ. ಈ ಬಗ್ಗೆ ಇತರ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಖಾದರ್ ಕಿಡಿ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ : ಅಕ್ಷಯ ತೃತೀಯಕ್ಕೆ ಮುಸ್ಲಿಂ ಜ್ಯುವೆಲ್ಲರಿ ಬಹಿಷ್ಕಾರಕ್ಕೆ ಪ್ರಮೋದ್ ಮುತಾಲಿಕ್ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಮಾತನಾಡುವವರ ಸಮಸ್ಯೆ ಅಲ್ಲ, ಸುಮ್ಮನಿರುವ ಸರಕಾರದ ಸಮಸ್ಯೆ. ಬೇಕಾಬಿಟ್ಟಿ ಮಾತನಾಡಲು ಸರಕಾರ ಅವಕಾಶ ಕೊಟ್ಟಿರುವುದರಿಂದ ಈ ಸಮಸ್ಯೆ ಆಗಿದೆ ಎಂದರು. ವಿಶ್ವದ ಯಾವುದೇ ರಾಷ್ಟ್ರದಲ್ಲಿಯೂ ಇಂತಹ ಹೇಳಿಕೆಯನ್ನು ಯಾರು ನೀಡುವುದಿಲ್ಲ. ಸರಕಾರದ ಮೌನ ದೇಶಕ್ಕೆ ದೊಡ್ಡ ನಷ್ಟ ತಂದೊಡ್ಡಲಿದೆ. ದೇಶದ ಮೇಲೆ ಪ್ರೀತಿ ಇದ್ದರೆ ಸರಕಾರ ಕ್ರಮ ಕೈಗೊಳ್ಳಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ನಳಿನ್ ಹೇಳಿಕೆಗೆ ಬೆಲೆ ಇಲ್ಲ : ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನಳಿನ್ ಕುಮಾರ್ ಕಟೀಲ್ ಹಿಂದೆ ಒಂದು ಡಾಲರ್‌ಗೆ ರೂ. 15 ಮಾಡುತ್ತೇವೆ, 2000 ರೂ. ಗೆ ಮರಳು ಕೊಡುತ್ತೇವೆ, ಕರಾವಳಿಗೆ ಕುಚ್ಚಲಕ್ಕಿ ಕೊಡುತ್ತೇವೆ, ಪ್ರತ್ಯೇಕ ಮರಳು ನೀತಿ ತರುತ್ತೇವೆ ಎಂದೆಲ್ಲ ಹೇಳಿದ್ದಾರೆ. ಇದು ಯಾವುದೂ ಸಾಧ್ಯವಾಗಿಲ್ಲ. ಈ ವಿಚಾರದಲ್ಲಿಯೂ ಹೀಗೇ ಆಗುತ್ತದೆ ಎಂದು ಹೇಳಿದರು.
ಓದಿ :ಪಿಎಸ್ಐ ನೇಮಕಾತಿ ಅಕ್ರಮ : ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಮೊಬೈಲ್ ಬಳಸಿ ಅಕ್ರಮ