ಮಂಗಳೂರು :ಹಿಂದೂ ಧರ್ಮದ ಮಹಿಳೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನೂರ್ ಜಹಾನ್ ಅವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದರು.
ನಾಗೇಶ್ ಮತ್ತು ವಿಜಯಲಕ್ಷ್ಮಿ - ಮೃತರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 8ರಂದು ಮಂಗಳೂರಿನ ಮೋರ್ಗನ್ ಗೇಟ್ ಬಳಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ನಾಗೇಶ್ ಎಂಬ ವ್ಯಕ್ತಿ ತನ್ನಿಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಹತ್ಯೆ ಮಾಡಿ ನೇಣು ಬಿಗಿದು ಸಾವನ್ನಪ್ಪಿದ್ದಾರೆ.
ಇದಕ್ಕೂ ಮೊದಲು ಮಂಗಳೂರಿನ ಪಾಂಡೇಶ್ವರ ಠಾಣೆಯ ಎಎಸ್ಐ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಅದರಲ್ಲಿ ನೂರ್ ಜಹಾನ್ ಎಂಬ ಮುಸ್ಲಿಂ ಮಹಿಳೆಯು ಪತ್ನಿಯನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದೇ ಆಕೆಯ ಸಾವಿಗೆ ಕಾರಣ ಎಂದು ಹೇಳಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನೂರ್ ಜಹಾನ್‌ಳನ್ನು ಬಂಧಿಸಲಾಗಿದೆ ಎಂದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರಕರಣ:
ನೂರ್ ಜಹಾನ್ ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಗಂಡನಿಂದ ಎಂಟು ವರ್ಷದಿಂದ ದೂರವಿದ್ದಾಳೆ. ಈಕೆಯ ಅಪಾರ್ಟ್‌ಮೆಂಟ್ ಇರುವಲ್ಲಿ ನಾಗೇಶ್ ಕುಟುಂಬ ಕೆಲ ಸಮಯದ ಹಿಂದೆ ವಾಸವಾಗಿತ್ತು.
ಅಲ್ಲಿಂದ ಬಂದ ಬಳಿಕವೂ ನಾಗೇಶ್ ಪತ್ನಿ ವಿಜಯಲಕ್ಷ್ಮಿ ನೂರ್ ಜಹಾನ್ ಜೊತೆಗೆ ಸಂಪರ್ಕದಲ್ಲಿದ್ದಳು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಮತ್ತು ನಾಗೇಶ್ ಮಧ್ಯೆ ವೈಮನಸ್ಸು ಮೂಡಿದ್ದು ವಿಜಯಲಕ್ಷ್ಮಿ ಮನೆ ಬಿಟ್ಟು ನೂರ್ ಜಹಾನ್ ಮನೆಯಲ್ಲಿ ವಾಸವಿದ್ದಳು.
ಆ ವೇಳೆ ನೂರ್ ಜಹಾನ್, ವಿಜಯಲಕ್ಷ್ಮಿ ಬಳಿ ಪತಿಗೆ ಡೈವೋರ್ಸ್ ನೀಡುವಂತೆ ಸೂಚಿಸಿದ್ದಳಂತೆ. ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸುವುದಾಗಿ ತಿಳಿಸಿದ್ದಾಳೆ. ಬಳಿಕ ಈಕೆಗೆ ಡೈವೋರ್ಸ್ ನೀಡಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದಳು.
ಇದನ್ನೂ ಓದಿ:ಮತಾಂತರ ಆತಂಕ: ಮಡದಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ
ಬಳಿಕ ನಾಗೇಶ್ ತನ್ನಿಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಹತ್ಯೆ ಮಾಡಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು. ಮೃತ ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ನೂರ್ ಜಹಾನ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿಸಿದರು.