ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ರಾಜ್ಯದಲ್ಲಿ ಮತ್ತೆ ಕೋವಿಡ್ ವೈರಸ್ ತಲ್ಲಣ ಮೂಡಿಸಿದೆ. ಈ ಹಿನ್ನೆಲೆ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆಯಾದ ಬೆನ್ನಲ್ಲೇ ನಾಳೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಸೇವೆಗಳನ್ನು ರದ್ದುಪಡಿಸಲಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.
ಕೋವಿಡ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ RD 158 TNR 2000 ದಿನಾಂಕ 4-01-2022ರ ಪ್ರಕಾರ ದಿನಾಂಕ 6-01-2022 ರಿಂದ (ನಾಳೆಯಿಂದ) ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗಾಗಿ ಯಾವುದೇ ಪೂಜಾ ಸೇವೆಗಳನ್ನು ನಡೆಸಲ್ಪಡುವುದಿಲ್ಲ ಎಂದು ದೇಗುಲದ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ರದ್ದು ಮುಂದಿನ ಆದೇಶದವರೆಗೆ ದೇವಳಕ್ಕೆ ಬರುವ ಭಕ್ತಾದಿಗಳಿಗೆ ಒಂದು ಬಾರಿಗೆ 50 ಮಂದಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ ಮತ್ತು ಭಾನುವಾರದಂದು ದೇವರ ದರ್ಶನಕ್ಕೂ ಕೂಡ ಅವಕಾಶವಿರುವುದಿಲ್ಲ.
ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರೆದ ಕೊರೊನಾ ಆರ್ಭಟ; ಮತ್ತೆ ಡಬಲ್ ಆಯ್ತು ಸೋಂಕಿತರ ಸಂಖ್ಯೆ!
ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡ ಭಕ್ತಾದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಸೇರಿದಂತೆ ಮತ್ತಿತರೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ದೇವರ ದರ್ಶನವನ್ನು ಪಡೆಯಬಹುದಾಗಿದೆ ಎಂದು ದೇಗುಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.