ಉಳ್ಳಾಲ:ಮಹಾಮಾರಿ ಕೋವಿಡ್ ವಕ್ರದೃಷ್ಟಿಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಪ್ರಸಿದ್ಧ ಉಳ್ಳಾಲ ಸೈಯ್ಯದ್ ಮದನಿ ದರ್ಗಾದಲ್ಲಿ ಈದ್ ಉಲ್ ಫಿತ್ರ್ ಆಚರಣೆಯ ವಿಶೇಷ ನಮಾಜ್ ನೆರವೇರಿಲ್ಲ.
ರಾಜ್ಯದಲ್ಲಿ 4.0 ಲಾಕ್ಡೌನ್ ಮುಂದುವರೆದ ಹಿನ್ನೆಲೆ ಉಳ್ಳಾಲ, ತಲಪಾಡಿ, ದೇರಳಕಟ್ಟೆ, ತೊಕ್ಕೊಟ್ಟು, ಕೋಟೆಕಾರು, ಕುತ್ತಾರು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಮುಚ್ಚಲಾಗಿತ್ತು. ಜನಸಂಚಾರವೂ ವಿರಳವಾಗಿತ್ತು. ಈದ್ ಹಬ್ಬದ ದಿನವಾದರೂ ಜನ ಮನೆಗಳಲ್ಲಿ ನಮಾಜ್ ನೆರವೇರಿಸುವ ಮೂಲಕ ಕೊರೊನಾ ತಡೆಗೆ ಕೈಜೋಡಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆಗಳಿರುವುದರಿಂದ ಉಳ್ಳಾಲ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿಯೂ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹಬ್ಬದ ಸಂದರ್ಭ ವಾಹನ, ಜನ ಸಂಚಾರದಿಂದ ಸದಾ ಗಿಜಿಗುಡುತ್ತಿದ್ದ ನೇತ್ರಾವತಿ ಸೇತುವೆ, ತೊಕ್ಕೊಟ್ಟು ಜಂಕ್ಷನ್, ಉಳ್ಳಾಲ ಜಂಕ್ಷನ್, ದೇರಳಕಟ್ಟೆ ಜಂಕ್ಷನ್ ಬಿಕೋ ಅನ್ನುತ್ತಿದ್ದವು.
ಹಬ್ಬ ಹಾಗೂ ಭಾನುವಾರದ ದಿನವಾಗಿದ್ದರಿಂದ ಉಳ್ಳಾಲ ಬೀಚ್ ತೀರದಲ್ಲಿ ಜನ ಸೇರುತ್ತಿದ್ದರು. ಆದರೆ ಪೊಲೀಸರು ಸಮುದ್ರ ತೀರಕ್ಕೆ ಆಗಮಿಸುತ್ತಿದ್ದ ಹಲವರನ್ನು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಕೂಡಾ ನಡೆಯಿತು.