ಮೈಸೂರು/ಚಾಮರಾಜನಗರ : ಮೈಸೂರುಜಿಲ್ಲೆಯಲ್ಲಿ ಇಂದು 416 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 693 ಜನರು ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮಹಾಮಾರಿ ಕೋವೀಡ್ನಿಂದ ಇಂದು ಮೂವರು ಮೃತಪಟ್ಟ ವರದಿಯಾಗಿದೆ.
ಇಂದಿನ 416 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42,789ಕ್ಕೆ ಏರಿಕೆಯಾಗಿದೆ. ಇಂದಿನ 693 ಜನರು ಸೇರಿದಂತೆ ಒಟ್ಟು 35,050 ಸೋಂಕಿತು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ 6,843 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಕೊರೊನಾದಿಂದ ಮೂವರು ಮೃತಪಟ್ಟಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 896 ಆಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ.
ಚಾಮರಾಜನಗರದಲ್ಲಿಯೂ ಮೂವರು ಬಲಿ:
ಚಾಮರಾಜನಗರ ಜಿಲ್ಲೆಯಲ್ಲಿಂದು 69 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5060ಕ್ಕೆ ಏರಿಕೆಯಾಗಿದೆ. ಇಂದು 69 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 739 ಆಗಿದೆ. 42 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 206 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 1104 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಮೃತರ ವಿವರ:
ಇಂದು ಕೊರೊನಾ ಮಹಾಮಾರಿಗೆ ಮೂವರು ಬಲಿಯಾಗಿದ್ದಾರೆ. ಹನೂರಿನ 64 ವರ್ಷದ ವೃದ್ಧ, ಚಾಮರಾಜನಗರದ 54 ವರ್ಷ ವ್ಯಕ್ತಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮದ 35 ವರ್ಷದ ಮಹಿಳೆ ಅಸುನೀಗಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಮಾನುಸಾರ ಸ್ವಯಂಸೇವಕರು ಗೌರವಯುತವಾಗಿ ನೆರವೇರಿಸಿದ್ದಾರೆ.