ಮಂಗಳೂರು: ಮಂಗಳೂರು ಗಂಜಿಮಠದ ಮಳಲಿಯಲ್ಲಿ ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಎದ್ದಿರುವುದರಿಂದ ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಳಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸೀದಿಯ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆಯಾದ ಬಳಿಕ ಈ ವಿಚಾರ ಕೋರ್ಟ್ನಲ್ಲಿದೆ. ಇಂದು ಹಿಂದೂ ಸಂಘಟನೆಗಳು ಆಯೋಜಿಸಿದ ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಮಳಲಿಯ ಮಸೀದಿ ಸುತ್ತಮುತ್ತ 500ಮೀಟರ್ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿಯಿಂದ ನಾಳೆ ಬೆಳಗ್ಗೆ 8 ಗಂಟೆವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.