1991ರಿಂದಲೂ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಮತ್ತೆ 'ಆನೆ ನಡೆದಿದ್ದೇ ದಾರಿ' ಎನ್ನುವಂತಾಗಿದೆ. ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಾಧಿಸಿದ್ದು, ನಳೀನ್ ಕುಮಾರ್ ಕಟೀಲ್ ಗೆಲುವಿನ ಮಂದಹಾಸ ಬೀರಿದ್ರು. ಹಿಂದೊಮ್ಮೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕರಾವಳಿಯ ಈ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಮೂರು ದಶಕಗಳಿಂದಲೂ ಅಧಿಪತ್ಯ ನಡೆಸುತ್ತಿದೆ.
ಕರಾವಳಿಯಲ್ಲಿ ಫಲ ನೀಡಿದ ಹಿಂದುತ್ವ ಅಜೆಂಡಾ!
ಮತ್ತೆ ಗೆದ್ದು ಬೀಗಿದ ಕುಮಾರ್ 'ಸಂಘ ಪರಿವಾರದ ಪ್ರಯೋಗ ಶಾಲೆ' ಎಂದು ಕರೆಯಲ್ಪಡುವ ದಕ್ಷಿಣ ಕನ್ನಡದಲ್ಲಿ ಹಿಂದುತ್ವ ಅಜೆಂಡಾದ ಮೂಲಕ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿರುತ್ತಿತ್ತು. ಕಾಂಗ್ರೆಸ್ ನಾಯಕ ಹಾಗು ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿ ಸತತ ಗೆಲುವು ದಾಖಲಿಸುತ್ತಿದ್ದರು. ಆದ್ರೆ, 90ರ ದಶಕದಿಂದ ಕಾಂಗ್ರೆಸ್ ಸತತವಾಗಿ ಸೋಲು ಅನುಭವಿಸುತ್ತಾ ಬಂದಿದೆ. ಇಲ್ಲಿ ಜನಾರ್ಧನ ಪೂಜಾರಿ 4 ಬಾರಿ ಸೋತರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಒಂದು ಬಾರಿ ಸೋಲಿನ ಬಿಸಿ ಅನುಭವಿಸಿದ್ದಾರೆ.ಈ ಎಲ್ಲಾ ಕಾರಣಕ್ಕೋ ಏನೋ ಈ ಬಾರಿ ಕೈ ಪಕ್ಷ ಹೊಸ ಮುಖಕ್ಕೆ ಮಣೆ ಹಾಕಿ ಅದೃಷ್ಟ ಪರೀಕ್ಷೆ ನಡೆಸಿತ್ತು. ಕ್ಷೇತ್ರದಾದ್ಯಂತ ಹುಮ್ಮಸ್ಸಿನಿಂದ ಸುತ್ತಾಡಿ ಭರವಸೆ ಮೂಡಿಸಿದ್ದ ಯುವ ನಾಯಕ ಮಿಥುನ್ ರೈ ಗೆಲ್ಲುವ ವಿಶ್ವಾಸದಿಂದ ಕಣಕ್ಕಿಳಿದಿದ್ದರು. ಆದ್ರೆ, ಕ್ಷೇತ್ರದ ಮತದಾರ ಅವರ ಕೈ ಹಿಡಿಯಲಿಲ್ಲ.
ಕ್ಷೇತ್ರದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆಕ್ರೋಶ ಇದ್ದರೂ, ಚುನಾವಣೆಯಲ್ಲಿ ಅದು ಪರಿಣಾಮ ಬೀರಿಲ್ಲ. ಪ್ರಧಾನಿ ಮೋದಿ ಚರಿಷ್ಮಾ, ಕೇಂದ್ರ ಸರ್ಕಾರದ ಸಾಧನೆಗಳು ಹಾಗು ಬಿಜೆಪಿ ಸಂಘಟನಾ ಚಾತುರ್ಯ ಕಟೀಲ್ ಅವರನ್ನು ವಿನ್ನರ್ ಮಾಡಿದೆ. ಅದೇನೇ ಇರಲಿ, ದಕ್ಷಿಣ ಕನ್ನಡದಲ್ಲಿ ಕೇಸರಿ ಪಕ್ಷದ ಗೆಲುವಿನ ಯಾತ್ರೆ ಮುಂದುವರಿದಿದೆ.