ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾಕಾಳಿ ಪಡ್ಪು ಆರ್ ಯುಬಿ ಮುಖಾಂತರ ಸಂಪರ್ಕ ರಸ್ತೆ ಕಲ್ಪಿಸಲು ಕಾಮಗಾರಿಗೆ ಹಿಂದಿನ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ವೇದವ್ಯಾಸ ಕಾಮತ್ ಶಾಸಕರಾದ ಬಳಿಕ ಮೊದಲ ಕಂತಿನಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಇದೀಗ ರಸ್ತೆ ಕಾಮಗಾರಿಗೆ ಚಾಲನೆ ದೊರಕಿದೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಜೆಪ್ಪು ರಾಷ್ಟ್ರೀಯ ಹೆದ್ದಾರಿ 66 ರಿಂದ ಮಾರ್ಗನ್ ಗೇಟ್ ಜಂಕ್ಷನ್ವರೆಗೆ ಮಹಾಕಾಳಿ ಪಡ್ಪು ಆರ್ ಯುಬಿ ಮುಖಾಂತರ ಸಂಪರ್ಕ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಹಾಗೂ ಮಂಗಳೂರು ಮನಪಾ ಈ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡದ ಕಾರಣ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಇದೀಗ ಬಿಜೆಪಿ ಸರ್ಕಾರ ಇರುವಾಗಲೇ ಕಾಮಗಾರಿ ನೆರವೇರುತ್ತಿರುವುದು ಸಂತಸದ ಸಂಗತಿ. ಸ್ಮಾರ್ಟ್ ಸಿಟಿಯಲ್ಲಿ 30 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, ಕಡಿಮೆಯಾಗಿರುವ ಹಣವನ್ನು ನನ್ನ ಅನುದಾನದಲ್ಲಿ ಕೊಡಲಾಗುತ್ತದೆ ಎಂದು ಹೇಳಿದ್ದೆ. ಆದ್ದರಿಂದ ಉಳಿದ 18 ಕೋಟಿ ರೂ. ಹಣವನ್ನು ರೈಲ್ವೆ ಇಲಾಖೆ ಮೂಲಕ ಬಿಡುಗಡೆ ಮಾಡಿಸಲಾಗಿದೆ ಎಂದು ಹೇಳಿದರು.