ಮಂಗಳೂರು :ಕೆನಡಾದ ಆಸ್ಪತ್ರೆಯೊಂದಲ್ಲಿ ಅನಸ್ತೇಸಿಯಾ ಟೆಕ್ನೀಶಿಯನ್ ಹುದ್ದೆ ದೊರಕಿಸಿಕೊಡುದಾಗಿ ಅಪರಿಚಿತನೊಬ್ಬನ ಮಾತು ನಂಬಿ ಮಂಗಳೂರಿನ ವ್ಯಕ್ತಿಯೋರ್ವರು 1.70 ಲಕ್ಷ ರೂ. ಕಳೆದುಕೊಂಡ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
online job scam case :ದೂರುದಾರರ ಮೊಬೈಲ್ಗೆ ಲಿಂಕ್ ಒಂದು ಬಂದಿದೆ. ಅದರಲ್ಲಿದ್ದ ಮೊಬೈಲ್ ನಂಬರ್ ಅನ್ನು ಇವರು ಸಂಪರ್ಕಿಸಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ 2021ರ ಅಕ್ಟೋಬರ್ 16ರಂದು ಇ-ಮೇಲ್ ಮೂಲಕ ಪಿರ್ಯಾದಿದಾರರಿಗೆ ಕೆನಡಾದ ಹಾಸ್ಪಿಟಲ್ನಲ್ಲಿ ಅನಸ್ತೇಶಿಯಾ ಟೆಕ್ನೀಶಿಯನ್ ಹುದ್ದೆ ಖಾಲಿಯಿರುವುದಾಗಿ ಹೇಳಿದ್ದರಂತೆ.
ಈ ಹಿನ್ನೆಲೆಯಲ್ಲಿ ಅವರು ತಮ್ಮ ಎಲ್ಲಾ ದಾಖಲೆಗಳುಗಳ ಜೆರಾಕ್ಸ್ ಪ್ರತಿಯನ್ನು ಇ-ಮೇಲ್ ಮಾಡಿದ್ದರು. ಆ ಬಳಿಕ ಹೆಚ್ಆರ್ ಮ್ಯಾನೇಜರ್ ಎಂದು ಅಲೆಕ್ಸ್ ಮೆನ್ಜೀಸ್ ಎಂಬುವರು ವಾಟ್ಸ್ಆ್ಯಪ್ ಕರೆ ಮಾಡಿ ಮಾತನಾಡಿ, ಆನ್ಲೈನ್ ಇಂಟರ್ ವ್ಯೂ ಮಾಡಿದ್ದರು.
ಉದ್ಯೋಗ ಕೊಡಿಸುವುದಾಗಿ ಹಣ ವಂಚನೆ : ಆನಂತರ ನೇದರ್ ಜಾರ್ಜ್ ಅಲೆನ್ ಎಂಬ ವ್ಯಕ್ತಿ ಕರೆ ಮಾಡಿ ಒರಿಜಿನಲ್ ಪಾಸ್‌ಪೋರ್ಟ್ ಕಳುಹಿಸುವಂತೆ ತಿಳಿಸಿದ್ದಾರೆ. ಅವರು ಹೇಳಿರುವ ವಿಳಾಸಕ್ಕೆ ಪಿರ್ಯಾದಿದಾರರು ತಮ್ಮ ಓರಿಜಿನಲ್ ಪಾಸ್‌ಪೋರ್ಟ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ್ದರು. ಈ ಬಗ್ಗೆ ರಿಸೀವ್ಡ್ ಮೆಸೇಜ್ ಕೂಡ ಬಂದಿದೆ. ಬಳಿಕ ವಾಟ್ಸ್ಆ್ಯಪ್ಗೆ ವೀಸಾ ಪ್ರತಿ ಸಹ ಬಂದಿದೆ.
ಇದನ್ನು ನಂಬಿ ವಂಚಕರು ಸೂಚಿಸಿರುವ ಖಾತೆ ಸಂಖ್ಯೆಗೆ 20 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಒಟ್ಟು 1,72,000 ರೂ.ವನ್ನು ಕಳುಹಿಸಿದ್ದರು. ಆ ಬಳಿಕ ಕೆನಡಾದಲ್ಲಿ ಯಾವುದೇ ಉದ್ಯೋಗವನ್ನು ದೊರಕಿಸಿಕೊಡದೆ ಅವರು ಮೋಸ ಮಾಡಿರುವುದಾಗಿ ಆರೋಪಿಸಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.