ಕರ್ನಾಟಕ

karnataka

ETV Bharat / city

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ವದಂತಿ ಹರಡುತ್ತಿರುವುದು ಖಂಡನೀಯ: ಮೋಹನ್ ರಾಮ್ ಸುಳ್ಳಿ - subramanya temple

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

mohan ram sulli of subramanya temple outrage on rumors spreaders
ಮೋಹನ್ ರಾಮ್ ಸುಳ್ಳಿ

By

Published : May 15, 2022, 7:48 PM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಹಾಗೂ ಆಡಳಿತ ಮಂಡಳಿ ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೆಟ್ಟ ಭಾವನೆಗಳಿಂದ ಸುದ್ದಿ ಹರಡುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಹೇಳಿದರು.

ಸುಬ್ರಹ್ಮಣ್ಯದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಲವು ಅನಾಮಧೇಯ ವ್ಯಕ್ತಿಗಳು ಇಂತಹ ಹೇಡಿತನದ ಕೆಲಸ ಮಾಡುತ್ತಿರುವುದು ಖಂಡನೀಯ. ಕ್ಷೇತ್ರಕ್ಕೆ ನಿರ್ಮಲ ಮನಸ್ಸಿನಿಂದ ಬರುವ ಭಕ್ತಾದಿಗಳ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಳದ ಮಾಸ್ಟರ್ ಪ್ಲಾನ್‌ನ ಮಾದರಿಯಲ್ಲಿಯೇ ಕೆಲಸ ಕಾರ್ಯಗಳು ನಡೆಯುತ್ತಿವೆ. ದೇವಳಕ್ಕೆ ಬರುವ ಭಕ್ತಾದಿಗಳಿಗಾಗಿ ಭೋಜನಶಾಲೆ, ಆಶ್ಲೇಷ ಮಂಟಪ, ರಥಬೀದಿಯಲ್ಲಿ ಪಾರಂಪರಿಕ ಕಟ್ಟಡ, ಸ್ನಾನ ಘಟ್ಟ ಹಾಗೂ ಗೋಶಾಲೆಗಳನ್ನು ನಿರ್ಮಿಸುವ ಪ್ರಯತ್ನದಲ್ಲಿರುವಾಗ ಕೆಲವೊಬ್ಬರು ಅನಾವಶ್ಯಕವಾಗಿ ಮೇಲಧಿಕಾರಿಗಳಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಎಲ್ಲಾ ಕಾಮಗಾರಿಗಳು ಪಿಡಬ್ಲೂಡಿಯ ಉಸ್ತುವಾರಿಯ ಮೂಲಕ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿವೆ ಎಂದು ಮೋಹನ್​ ರಾಮ್​ ಸ್ಪಷ್ಟಪಡಿಸಿದರು.

ಮೋಹನ್ ರಾಮ್ ಸುಳ್ಳಿ

ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಸಾಕಷ್ಟು ವಸತಿ ಗೃಹಗಳ ವ್ಯವಸ್ಥೆ ಇದೆ. ಆದರೂ ಅಧಿಕವಾಗಿ ಬರುವ ಭಕ್ತಾದಿಗಳಿಗೆ ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪ ಹಾಗೂ ಭೋಜನ ಶಾಲೆಗಳಲ್ಲಿ ಮಧ್ಯರಾತ್ರಿಯವರೆಗೆ ವ್ಯವಸ್ಥೆಯನ್ನು ಮಾಡಲು ನಿರಂತರವಾಗಿ ದೇವಳದ ನೌಕರರು, ಭದ್ರತಾ ಸಿಬ್ಬಂದಿ, ವ್ಯವಸ್ಥಾಪನಾ ಸಮಿತಿಯವರು ಹಾಗೂ ಮಾಸ್ಟರ್ ಪ್ಲಾನ್‌ನ ಸದಸ್ಯರು ಶ್ರಮಿಸುತ್ತಿದ್ದಾರೆ. ಆದ್ರೆ ಮಧ್ಯರಾತ್ರಿ ಆಗಮಿಸುವ ಕೆಲ ಭಕ್ತಾದಿಗಳು ರಥಬೀದಿಯಲ್ಲಿ ಮಲಗಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಅಂತಹ ಭಕ್ತಾದಿಗಳಿಗೂ ಕೂಡ ವಸತಿ ವ್ಯವಸ್ಥೆಯನ್ನು ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕೆಎಸ್​ಎಸ್ ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ 1983ರಲ್ಲಿ ಪ್ರಾರಂಭಗೊಂಡ ಪದವಿ ಕಾಲೇಜು ಅನುದಾನಿತ ಕಾಲೇಜಾಗಿದೆ. 1983ರ ನಂತರ ಕಾರ್ಯ ನಿರ್ವಹಿಸುತ್ತಿದ್ದಂತಹ ಬಹುತೇಕ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅನುದಾನಕ್ಕೆ ಒಳಪಟ್ಟಿದ್ದರು. ಆದರೆ ಕಳೆದ 5 ವರ್ಷಗಳಲ್ಲಿ ಶೇ.95ರಷ್ಟು ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ನಿವೃತ್ತಿಯನ್ನು ಹೊಂದಿರುತ್ತಾರೆ. 2023-24ನೇ ಸಾಲಿನಲ್ಲಿ ಸಂಸ್ಥೆಯು ಯುಜಿಸಿಯ ನ್ಯಾಕ್ ಸಮಿತಿಯನ್ನು ಎದುರಿಸಬೇಕಾಗಿದೆ. ಈ ಸಮಯದಲ್ಲಿ ಕನಿಷ್ಠ ಪಕ್ಷ 'ಬಿ' ಗ್ರೇಡನ್ನು ಪಡೆಯಲೇಬೇಕು. ಇಲ್ಲದೇ ಇದ್ದಲ್ಲಿ ಯುಜಿಸಿ ಹಾಗೂ ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳು ಸ್ಥಗಿತಗೊಳ್ಳುತ್ತವೆ. ಆದ್ದರಿಂದ ಯುಜಿಸಿಯ ನಿಯಮಾವಳಿ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರುವಂತಹ ಪದವೀಧರರನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿ ನಮ್ಮ ಆಡಳಿತ ಮಂಡಳಿಯು ಬಂದ ನಂತರ ವಿದ್ಯಾರ್ಹತೆ ಹಾಗೂ ಮೀಸಲಾತಿಯನ್ನು ಕೂಡ ಪರಿಗಣಿಸಿ ನೇಮಕ ಮಾಡಿದೆ ಎಂದರು.

ಪಿಹೆಚ್‌ಡಿ ಪದವೀಧರರಾಗಿದ್ದು 10 ವರ್ಷಗಳ ಅನುಭವವನ್ನು ಹೊಂದಿರುವವರನ್ನು ಉಪನ್ಯಾಸಕರನ್ನಾಗಿ ನೇಮಿಸಲಾಗಿದೆ. ಉಪನ್ಯಾಸಕರಿಗೆ ವಿವಿಧ ವೇತನ ಶ್ರೇಣಿಯನ್ವಯ ವೇತನವನ್ನು ನೀಡಲಾಗುತ್ತಿದೆ. ಅಲ್ಲದೇ ಅವರಿಗೆ ಪ್ರತೀ ವರ್ಷದಲ್ಲಿ ಶೇ.7ರಂತೆ ಏರಿಸಿ ವೇತನವನ್ನು ನೀಡಲಾಗುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದಲ್ಲಿ ವೇತನ ತಾರತಮ್ಯವನ್ನು ಸರಿಪಡಿಸಲು ಚಿಂತಿಸಲಾಗುತ್ತಿದೆ. ಅದನ್ನು ಕಾಲೇಜಿನ ಸಂಪನ್ಮೂಲ ನೋಡಿಕೊಂಡು ಉಳಿದ ಹಣವನ್ನು ದೇವಳದ ವತಿಯಿಂದ ನೀಡಲು ಈಗಾಗಲೇ ತೀರ್ಮಾನಿಸಿ ನಿರ್ಣಯವನ್ನು ಮಾಡಲಾಗಿದೆ ಎಂದು ಸುಳ್ಳಿ ಮಾಹಿತಿ ನೀಡಿದರು.

ಇದನ್ನೂ ಓದಿ:ವಿಜೃಂಭಣೆಯ ಅದ್ದೂರಿ ದೊಡ್ಡಬಳ್ಳಾಪುರ ಕರಗ ಮಹೋತ್ಸವಕ್ಕೆ ಸಿದ್ದತೆ.. 97ನೇ ಬಾರಿ ಕರಗ ಹೊರಲಿರುವ ಭೀಮರಾಜ್

ಇನ್ನೂ ವಿಶೇಷ ದಿನಗಳಲ್ಲಿ ಹೆಚ್ಚಿನ ಆಶ್ಲೇಷ ಪೂಜೆ ನಡೆಸುವ ಸಲುವಾಗಿ ಅರ್ಚಕರಲ್ಲಿ ಮಾತನಾಡಿ, ಬೇರೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

ABOUT THE AUTHOR

...view details