ಮಂಗಳೂರು:ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಮುಂದಿನ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಈಗಲೇ ಯೋಚನೆ ಮಾಡಬೇಕಿದೆ. ತಾಲೂಕು ಮಟ್ಟದಲ್ಲಿ 15 ವೆಂಟಿಲೇಟರ್ಗಳು ಉಪಯೋಗವಾಗುತ್ತಿಲ್ಲ. ತಕ್ಷಣ ಅವುಗಳನ್ನು ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಉಪಯೋಗಿಸುವಂತೆ ಒತ್ತಾಯಿಸುತ್ತೇವೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಆಕ್ಸಿಜನ್ ಎಷ್ಟಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಹಾಗೂ ಆಯಾ ಜಿಲ್ಲಾಡಳಿತಗಳು ಶ್ವೇತಪತ್ರ ಬಿಡುಗಡೆ ಮಾಡಲಿ. ಯಾಕೆಂದರೆ ಮುಂಚೆಗಿಂತ ಈಗ ಮೂರು ಪಟ್ಟು ಅಧಿಕ ವೆಂಟಿಲೇಟರ್ಗಳ ಅಗತ್ಯವಿದೆ. ಆದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಎಷ್ಟು ಆಕ್ಸಿಜನ್ಗಳ ಅವಶ್ಯಕತೆ ಇದೆ, ಎಷ್ಟು ಸರಬರಾಜು ಆಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಂದು ವಾರದ ಹಿಂದೆ ಆಕ್ಸಿಜನ್ ಕೊರತೆಯ ಬಗ್ಗೆ ಗಮನ ಸೆಳೆದಾಗ ಯಾವುದೇ ಸಮಸ್ಯೆಗಳಿಲ್ಲ. ಸಾಕಷ್ಟು ಆಕ್ಸಿಜನ್ ಇದೆ ಎಂದು ದಿನಕ್ಕೊಬ್ಬ ಸಚಿವರು ಹೇಳಿಕೆ ನೀಡುತ್ತಿದ್ದರು. ಆದರೆ, ನಿನ್ನೆ ಚಾಮರಾಜನಗರದಲ್ಲಿ ನಡೆದ ದುರಂತಕ್ಕೆ ಯಾರು ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಲಿ. ಇದರಲ್ಲಿ ಸರ್ಕಾರದ ವೈಫಲ್ಯವೇ ಎದ್ದು ಕಾಣುತ್ತಿದೆ.