ಮಂಗಳೂರು :ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಶಾಸಕ ಯು ಟಿ ಖಾದರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಫೋನ್ ಮೂಲಕ ಕ್ಷೇತ್ರದ ಜನತೆಯೊಂದಿಗೆ ಈಗಲೂ ಸಂಪರ್ಕದಲ್ಲಿದ್ದಾರೆ.
ಗಾಯದಿಂದ ಚೇತರಿಸುತ್ತಿರುವ ಶಾಸಕ ಖಾದರ್.. ಅಪಘಾತದಿಂದ ಸ್ವಲ್ಪ ಮಟ್ಟಿಗೆ ಕಾಲಿಗೆ ಗಾಯವಾಗಿದ್ದು, ಪ್ಲಾಸ್ಟರ್ ಹಾಕಲಾಗಿದೆ. ವಾಕಿಂಗ್ ಸ್ಟಿಕ್ ಸಹಾಯದಿಂದ ಮನೆಯೊಳಗೆ ನಡೆದಾಡುತ್ತಿದ್ದಾರೆ. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ.
ಎರಡು ಮೂರು ಸಣ್ಣಮಟ್ಟಿನ ವ್ಯಾಯಾಮ ಮಾಡುವುದನ್ನು ಸೂಚಿಸಿದ್ದಾರೆ. ಈಗ ಅವರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಮೂರು ದಿನಗಳಲ್ಲಿ ಮಂಗಳೂರಿಗೆ ಬರಲಿದ್ದಾರೆ.
ಬೆಳಗಾವಿ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಶಾಸಕ ಯು ಟಿ ಖಾದರ್ ಅವರಿದ್ದ ಕಾರು ದಾವಣಗೆರೆ ತಾಲೂಕಿನ ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿತ್ತು. ಖಾದರ್ ಆಪ್ತ ಕಾರ್ಯದರ್ಶಿ ಲಿಫ್‌ಜತ್ ಕಾರು ಚಲಾಯಿಸುತ್ತಿದ್ದರು.
ಮುಂದೆ ಹೋಗುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ ಖಾದರ್ ಸಹಿತ ಲಿಫ್‌ಜತ್ ಹಾಗೂ ಮತ್ತೋರ್ವರು ಸಣ್ಣಪುಟ್ಟದಾಗಿ ಗಾಯಗೊಂಡು ಅಪಾಯದಿಂದ ಪಾರಾಗಿದ್ದರು.