ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಾಕ್ರೋಶದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಸರ್ಕಾರದ ಸೋಲು-ಜನರ ಗೆಲುವು:
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ತೈಲ ಬೆಲೆಯನ್ನು 70 ರೂ.ಗೆ ಇಳಿಸಲು 70 ವರ್ಷ ಬೇಕಾಯಿತು. ಆದರೆ ಇದನ್ನು 110ಕ್ಕೆ ಏರಿಕೆ ಮಾಡಲು ಬಿಜೆಪಿಗರಿಗೆ ಕೇವಲ ಏಳು ವರ್ಷಗಳು ಸಾಕಾಯಿತು. ಜನರು ಇವರನ್ನು ಉಪ ಚುನಾವಣೆಯಲ್ಲಿ ಸೋಲಿಸಿದ ಕಾರಣ ತೈಲ ಬೆಲೆ ಇಳಿಕೆಯಾಯಿತು. ಇದು ಸರ್ಕಾರದ ಸೋಲಾಗಿದ್ದು, ಜನರ ಗೆಲುವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಜನರ ಹೊರೆ ಕಡಿಮೆ ಮಾಡಿತ್ತು:
ಸರ್ಕಾರ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೂ ಕೂಡ ಏರಿಯಾಗಿರುವ ದಿನ ಬಳಕೆ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಕಾರ್ಪೊರೇಟ್ ಸಂಸ್ಥೆಗಳ ಭಾರವನ್ನು ಇಳಿಕೆ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಹಣ ನಷ್ಟವಾಗಿದೆ. ಕಾಂಗ್ರೆಸ್ ಜನರ ಹೊರೆ ಕಡಿಮೆ ಮಾಡಿತ್ತು. ಆದ್ರೆ ಬಿಜೆಪಿ ಕಾರ್ಪೊರೇಟ್ ಸಂಸ್ಥೆಗಳ ಭಾರ ತಗ್ಗಿಸಲು ಹೋಗಿ ಜನರಿಗೆ ಹೊರೆ ಹಾಕಿದೆ. ನಮ್ಮ ದೇಶದ ನೆರೆಹೊರೆಯ ಆರ್ಥಿಕವಾಗಿ ಹಿಂದುಳಿದ ಹಾಗೂ ಮುಂದುವರಿದ ದೇಶಗಳಲ್ಲಿ ತೈಲ ಬೆಲೆ ಕಡಿಮೆಯಿದೆ. ಈ ಸರ್ಕಾರದ ಸಾಧನೆ ಅಂದ್ರೆ, ಇಡೀ ಏಷ್ಯಾದಲ್ಲಿಯೇ ಅತೀ ಹೆಚ್ಚು ತೈಲ ಬೆಲೆಯೇರಿಕೆ ಮಾಡಿರುವುದು ಎಂದು ಹೇಳಿದರು.