ಮಂಗಳೂರು: ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ವ್ಯತ್ಯಯ ಮಾಡಿ ಅಕ್ರಮ ಎಸಗುತ್ತಿರುವುದನ್ನು ದಿಢೀರ್ ದಾಳಿಯ ಮೂಲಕ ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿರುವ ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಪಡಿತರ ವಿತರಕರನ್ನು ತರಾಟೆಗೆ ತೆಗೆದುಕೊಂಡರು.
ಓದಿ: ದ್ವೀಪ ಪ್ರದೇಶ ಬಡ್ಡ ಕುದ್ರು ನಿವಾಸಿಗಳಿಂದ ತೂಗು ಸೇತುವೆಗೆ ಮನವಿ: ಡಾ. ಭರತ್ ಶೆಟ್ಟಿ ಸ್ಪಂದನೆ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾವೂರು 18ನೇ ವಾರ್ಡಿನ ಆಕಾಶಭವನದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ, ಪಡಿತರ ವಿತರಣೆ ಮಾಡುವ ಸಿಬ್ಬಂದಿ ಅಕ್ರಮ ಎಸಗಿರುವ ಕುರಿತಾಗಿ ಜನರಿಂದ ಆರೋಪಗಳು ಕಳೆದ ಒಂದು ತಿಂಗಳಿನಿಂದ ಕೇಳಿ ಬರುತ್ತಿತ್ತು. ಈ ಬಗ್ಗೆ ಸ್ಥಳೀಯ ಮನಪಾ ಸದಸ್ಯೆ ಗಾಯತ್ರಿ ರಾವ್ ಅವರು ಸಾಕಷ್ಟು ಬಾರಿ ನ್ಯಾಯಬೆಲೆ ಅಂಗಡಿಯವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಮಾತನ್ನು ಕಿವಿಗೆ ಹಾಕಿಕೊಳ್ಳದ ಪಡಿತರ ವಿತರಕ ಉಡಾಫೆಯ ಮಾತನಾಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ, ಇಂದು ದಿಢೀರ್ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರು ಕೊರೊನಾದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಂಥ ಅಪರಾಧಗಳನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಆದೇಶಿಸಿದರು. ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯೆ ಗಾಯತ್ರಿ ರಾವ್ ಜೊತೆಗಿದ್ದರು.