ಕರ್ನಾಟಕ

karnataka

ETV Bharat / city

ಮನೆ ಕುಸಿದು ಮೃತಪಟ್ಟ ಮಕ್ಕಳ ಮನೆಗೆ ಸಚಿವ ಸುನಿಲ್​​ ಕುಮಾರ್​​ ಭೇಟಿ: ಮನೆ ನಿರ್ಮಿಸಿ ಕೊಡುವ ಭರವಸೆ

ಕುಮಾರಧಾರ ಪರ್ವತಮುಖಿಯಲ್ಲಿ ಮನೆ ಕುಸಿದು ಮಕ್ಕಳು ಸಾವು - ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಭೇಟಿ - ಕುಟುಂಬಸ್ಥರಿಗೆ ಸಾಂತ್ವನ, ಮನೆ ನಿರ್ಮಿಸಿಕೊಡುವ ಭರವಸೆ

Minister Sunil Kumar visit Sullia
ಮನೆ ಕುಸಿದು ಮೃತಪಟ್ಟ ಮಕ್ಕಳ ಮನೆಗೆ ಸಚಿವ ಸುನಿಲ್​​ ಕುಮಾರ್​​ ಭೇಟಿ

By

Published : Aug 3, 2022, 12:28 PM IST

ಸುಳ್ಯ(ದಕ್ಷಿಣ ಕನ್ನಡ):ಮನೆ ಕುಸಿದು ಬಿದ್ದು ಮೃತಪಟ್ಟ ಕುಸುಮಾಧರ ಮತ್ತು ರೂಪಶ್ರೀ ದಂಪತಿಯ ಮಕ್ಕಳಾದ ಶ್ರುತಿ (11), ಜ್ಞಾನಶ್ರೀ (6) ಇವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ನೊಂದ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಲ್ಲೆಲ್ಲಿ ಪ್ರಾಕೃತಿಕ ಹಾನಿಯಾಗಿದೆಯೋ ಅಲ್ಲಿ ಸರ್ಕಾರ ನಿಮ್ಮ ನೆರವಿಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂಗಡಿಗಳಿಗೆ ನಷ್ಟ ಪರಿಹಾರ ಕೊಡುವ ವ್ಯವಸ್ಥೆ ಇಲ್ಲ. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ. ಮುಖ್ಯಮಂತ್ರಿಗಳು ಮೌಖಿಕವಾಗಿ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಆಗದಿರಲಿ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಹೇಳಿದರು.

ಸುನಿಲ್ ಕುಮಾರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ

ಕುಸುಮಾಧರ ಅವರ ಸುಳ್ಯ ತಾಲೂಕಿನ ಪಂಜದಲ್ಲಿರುವ ಮನೆಗೆ ಬರುವ ರಸ್ತೆಯು ಸಂಪೂರ್ಣ ಕೆಟ್ಟು ಕೆಸರುಮಯ ಆಗಿತ್ತು. ಈ ಹಿನ್ನೆಲೆ ಸಚಿವರಾದಿ ಅಧಿಕಾರಿಗಳು ತಮ್ಮ ಇಲಾಖೆ ವಾಹನವನ್ನು ಬಿಟ್ಟು ಅರಣ್ಯ ಇಲಾಖೆ ಮತ್ತು ಖಾಸಗಿ ಜೀಪುಗಳಲ್ಲಿ ಮನೆಗೆ ಆಗಮಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಸಿಇಒ ಕುಮಾರ್, ಎಸಿ ಗಿರೀಶ್ ನಂದನ್, ಕಡಬ ತಹಶೀಲ್ದಾರ್ ಅನಂತ ಶಂಕರ್, ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ, ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಮೆಸ್ಕಾಂ ಜೆಇಇ ಹರಿಕೃಷ್ಣ ಸೇರಿದಂತೆ ಕಂದಾಯ, ಮೆಸ್ಕಾಂ, ಸ್ಥಳೀಯ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಸುಬ್ರಮಣ್ಯದಲ್ಲಿ ಭಾರಿ ಮಳೆ: ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವು

ABOUT THE AUTHOR

...view details