ಉಡುಪಿ:ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯಗೆ ಮೊಟ್ಟೆ ಎಸೆದು ಪ್ರತಿಭಟಿಸುತ್ತಿರುವ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಯಾರೋ ಹೇಳಿಕೊಟ್ಟು ಮಾಡಿಸುತ್ತಿರುವುದಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆ ಆಗುತ್ತದೆ. ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿದ್ದಾರೆ. ಸಾವರ್ಕರ್ ಅವಹೇಳನ ಸಹಿಸಿಕೊಳ್ಳಲು ಯುವ ಸಮುದಾಯ ಸಿದ್ಧವಿಲ್ಲ ಎಂದು ಅವರು ಕಿಡಿಕಾರಿದರು.
ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗಲ್ಲ. ಸಾವರ್ಕರ್ ಫೋಟೋ ಕಂಡರೆ ಆಗಲ್ಲ. ತಮ್ಮ ನಡವಳಿಕೆ, ಹೇಳಿಕೆಯಿಂದ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ. ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ. ಹಾಗಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಸುನೀಲ್ ಕುಮಾರ್ ಹೇಳಿದರು.
ಪ್ರತಿಭಟನೆ ಸಹಿಸುವ ಶಕ್ತಿಯೂ ಇರಬೇಕು: ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುತ್ತೇನೆ ಎನ್ನುವ ಕಾಲ ಹೊರಟು ಹೋಗಿದೆ. ಅವರ ಹೋರಾಟದ ಕಾರಣಕ್ಕೆ ಅವರನ್ನು ವೀರ ಸಾವರ್ಕರ್ ಎಂದು ಕರೆದಿದ್ದಾರೆ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬರ್ದ ತಿಳಿದುಕೊಂಡಿದ್ದಾರೆ ಎಂದರ್ಥ. ಸಾವರ್ಕರ್ ಅಂತಸತ್ವ ತಿಳಿದವರು ಯಾರು ಅವರನ್ನು ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದರು.