ಮಂಗಳೂರು: ರಾಜ್ಯದಲ್ಲಿ ಬೆಂಗಳೂರು ಕೇಂದ್ರಿತವಾದ ಐಟಿ ಮತ್ತು ತಂತ್ರಜ್ಞಾನ ಉದ್ಯಮವನ್ನು ವಿಕೇಂದ್ರೀಕರಣ ಮಾಡುವ ಉದ್ದೇಶವಿದೆ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನಗರದ ಹೋಟೆಲ್ ಒಂದರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮದಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ದೇಶದ ಪ್ರತಿ ಜಿಲ್ಲೆಯ ಒಂದು ಹಳ್ಳಿಯನ್ನು ಆಯ್ಕೆ ಮಾಡಲಾಗುತ್ತದೆ. ದ.ಕ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಯುವಜನತೆಯ ಸಬಲೀಕರಣ ಮಾಡುವ ಬಗ್ಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೇ ಕೌಶಲ್ಯ ಅಭಿವೃದ್ಧಿ ಹಾಗೂ ಐಟಿ ಅಭಿವೃದ್ಧಿಗೂ ಸಂಪೂರ್ಣ ಸಹಕಾರ ನೀಡಲಾಗುತ್ತದೆ.
ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಡಿಕೆಯಿಟ್ಟಿದ್ದಾರೆ. ನಾನು ಶಕ್ತಿಮೀರಿ ಐಟಿ ಪಾರ್ಕ್ ಆರಂಭಿಸಲು ಪ್ರಯತ್ನಿಸುವೆ. ಈ ಮೂಲಕ ಐಟಿ ಉದ್ದಿಮೆ ಅಭಿವೃದ್ಧಿ, ಐಟಿಯ ಮೂಲಕ ಆರ್ಥಿಕ ಬಲ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಯಾದಗಿರಿ: ಬಂದೂಕಿನಿಂದ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಭರ್ಜರಿ ಸ್ವಾಗತ!!
ಭಾರತವು ಭವಿಷ್ಯದಲ್ಲಿ ಐಟಿ ಉದ್ದಿಮೆಯಲ್ಲಿ ವಿವಿಧ ದೇಶಗಳಿಗೆ ಬಹುದೊಡ್ಡ ಪಾಲುದಾರ ಆಗಲಿದೆ. ಕೊರೊನೋತ್ತರ ಕಾಲದಲ್ಲಿ ವಿಶ್ವದ ಐಟಿ ಕಂಪನಿಗಳಿಗೆ ನಂಬಿಕೆಯ ಹಾಗೂ ವಿಶ್ವಾಸಾರ್ಹ ಪಾಲುದಾರರ ಅಗತ್ಯವಿದೆ. ಭಾರತೀಯ ಐಟಿ ತಂತ್ರಜ್ಞಾನ ವಲಯ ಹೆಚ್ಚು ಹೆಚ್ಚು ವೃದ್ಧಿಗೊಂಡಿದೆ. ಅಲ್ಲದೇ ಪ್ರಧಾನಿ ಮೋದಿಯವರು ಡಿಜಿಟಲ್ನಲ್ಲಿ ಒಂದು ಟ್ರಿಲಿಯನ್ ಡಾಲರ್ ಹೂಡಿಕೆಯ ಟಾರ್ಗೆಟ್ ನೀಡಿದ್ದಾರೆ. ಈಗಿನ ಡಿಜಿಟಲ್ ಆರ್ಥಿಕತೆ 200-225 ಬಿಲಿಯನ್ ಡಾಲರ್ ಇದೆ. ಮುಂದಿನ 5-6 ವರ್ಷಗಳಲ್ಲಿ ನಾವು ಈ ಟಾರ್ಗೆಟ್ ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.