ಪುತ್ತೂರು (ದಕ್ಷಿಣ ಕನ್ನಡ): ದ.ಕ.ಜಿಲ್ಲೆಯಲ್ಲಿ ಇದುವರೆಗೆ 6,53,000 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಪುತ್ತೂರಿನ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕೋವಿಡ್ 19 ಲಸಿಕಾ ಮಹಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೆ 4,90,000 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 1,30,000 ಜನರಿಗೆ 2ನೇ ಡೋಸ್ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಶೇ. 73ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಪುತ್ತೂರು ತಾಲೂಕಿಗೆ 5 ಸಾವಿರ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಜಿಲ್ಲೆಯ 78 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು, 4 ತಾಲೂಕು ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, 3 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 99 ಸೆಂಟರ್‌ಗಳಲ್ಲಿ ಏಕಕಾಲದಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 18 ಲಕ್ಷ ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ ಎಂದರು.
ಅನ್‌ಲಾಕ್ ಮಾರ್ಗದರ್ಶಿ ಸೂತ್ರಗಳನ್ನು ಸಾಕಷ್ಟು ಎಚ್ಚರವಹಿಸಿಯೇ ರಚಿಸಲಾಗಿದೆ. ಈ ವಿಚಾರದಲ್ಲಿ ಜನ ಗೊಂದಲಕ್ಕೀಡಾಗಬಾರದು. ಮೊದಲ ಹಂತದಲ್ಲೇ ಎಲ್ಲ ಮಳಿಗೆಗಳನ್ನು ತೆರೆದರೆ, ಕೊರೊನಾ ನಿಯಂತ್ರಣದ ಉದ್ದೇಶ ದಿಕ್ಕು ತಪ್ಪಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರಂಭದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಇತ್ತು. ನಂತರ ದಿನವೊಂದಕ್ಕೆ 14 ಸಾವಿರಕ್ಕೇರಿದೆ. ಭಾನುವಾರ 10 ಸಾವಿರ ಮಂದಿಯ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 500ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿದೆ ಎಂದರು.
ಪುತ್ತೂರಿನ ಘನ ತ್ಯಾಜ್ಯ ಘಟಕ ಯೋಜನೆ ರಾಜ್ಯದಲ್ಲೇ ಮಾದರಿ