ಪುತ್ತೂರು: ಶಿಕ್ಷಣ ವಿಚಾರದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಇತ್ತೀಚಿನ ದಿನಗಳಲ್ಲಿ ಶಾಲಾ ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ ಗುರು, ಬಸವಣ್ಣ ಪಠ್ಯಗಳನ್ನು ತೆಗೆದು ಹಾಕಿದೆ ಎಂದು ಸುಳ್ಳುಸುದ್ದಿಯನ್ನು ಹರಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಯಾವ ಪಠ್ಯವನ್ನೂ ತೆಗೆದು ಹಾಕಿಲ್ಲ. ಮಕ್ಕಳಿಗೆ ಹೊರೆಯಾಗದಿರಲಿ ಎನ್ನುವ ಕಾರಣಕ್ಕೆ ಪಠ್ಯದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಲಾಗಿದೆ. ಕಾಂಗ್ರೆಸ್ನ ಸುಳ್ಳು ಆರೋಪಕ್ಕೆ ಪಠ್ಯ ಪುಸ್ತಕ ಮುದ್ರಣಗೊಂಡು ಬಂದ ಬಳಿಕ ಉತ್ತರ ಸಿಗಲಿದೆ ಎಂದು ಹೇಳಿದರು.
ರಾಜ್ಯ ಹಾಗೂ ದೇಶವ್ಯಾಪಿ ಚರ್ಚೆಗೆ ಒಳಗಾಗಿದ್ದ ಸಮವಸ್ತ್ರ ವಿವಾದಕ್ಕೆ ಮತ್ತೆ ಅವಕಾಶ ನೀಡದಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ಈಗಾಗಲೇ ಶಾಲಾಭಿವೃದ್ಧಿ ಸಮಿತಿಗೆ ಸಮವಸ್ತ್ರದ ಕುರಿತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಫ್ರೌಢ ಶಾಲಾ ಮಟ್ಟದವರೆಗೆ ಸರ್ಕಾರವೇ ಮಕ್ಕಳಿಗೆ ಸಮವಸ್ತ್ರ ವಿತರಿಸುವ ವ್ಯವಸ್ಥೆಯನ್ನು ಮಾಡಲಿದ್ದು, ಈ ಬಾರಿ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸಮವಸ್ತ್ರ ವಿತರಣೆಯಲ್ಲಿ ಕೊಂಚ ತಡವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈ ಬಾರಿ ಪಠ್ಯ ಪುಸ್ತಕವನ್ನು ಶಾಲೆ ಆರಂಭಗೊಂಡ ತಿಂಗಳ ಒಳಗಾಗಿ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಅಲ್ಲದೆ ಈ ಬಾರಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಲೆ ಆರಂಭದಂದೇ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದ್ದು, 15 ಸಾವಿರ ಹೊಸ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ತಿಳಿಸಿದರು.