ಮಂಗಳೂರು: ಜೈವಿಕ ಇಂಧನವು ಪ್ರಸ್ತುತ ಮತ್ತು ಭವಿಷ್ಯತ್ತಿನ ಅವಶ್ಯಕತೆಗಳಲ್ಲೊಂದು. ಆದರೆ ಜೈವಿಕ ಇಂಧನ ತಯಾರಿ ಸಣ್ಣ ಮಟ್ಟದಲ್ಲಿ ಮಾತ್ರ ನಡೆಯುತ್ತಿರುವುದರಿಂದ ಪರ್ಯಾಯ ಇಂಧನವಾಗಿ ಅನುಕೂಲವಾಗಿಲ್ಲ. ಆದರೆ ಇದೀಗ ರೈತರ ಒಗ್ಗೂಡುವಿಕೆಯಲ್ಲಿ ಮೀರಾ ಕ್ಲೀನ್ ಫ್ಯುಯೆಲ್ ಲಿಮಿಟೆಡ್ ಸಂಸ್ಥೆಯು ದೇಶದ ಎಲ್ಲಾ ತಾಲೂಕುಗಳಲ್ಲಿ ಜೈವಿಕ ಇಂಧನ ಘಟಕ ನಿರ್ಮಾಣಕ್ಕೆ ನಿರ್ಧರಿಸಿದೆ.
ಜೈವಿಕ ಇಂಧನವನ್ನು ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಗುರಿಯೊಂದಿಗೆ ಮೀರಾ ಕ್ಲೀನ್ ಫ್ಯುಯೆಲ್ ಲಿಮಿಟೆಡ್ ಸಂಸ್ಥೆಯು ಯೋಜನೆಯನ್ನು ರೂಪಿಸಿಕೊಂಡಿದೆ. ಅದರ ಪ್ರಕಾರ ಪ್ರತಿ ತಾಲೂಕಿನಲ್ಲಿ 50 ಕೋಟಿ ವೆಚ್ಚದಲ್ಲಿ ಜೈವಿಕ ಇಂಧನ ತಯಾರಿ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತದೆ. ಇದನ್ನು ರೈತರ ಒಗ್ಗೂಡುವಿಕೆಯಲ್ಲಿ ಮಾಡಲು ನಿರ್ಧರಿಸಲಾಗಿದೆ.
ತಾಲೂಕು ಮಟ್ಟದಲ್ಲಿ ಬರಲಿದೆ ರೈತರಿಗೆ ಲಾಭ ತರುವ ಜೈವಿಕ ಇಂಧನ ಘಟಕ ಪ್ರತಿ ತಾಲೂಕಿನಲ್ಲಿ ಜೈವಿಕ ಇಂಧನ ಕಾರ್ಖಾನೆ ನಡೆಸಲು ಮುಂದೆ ಬರುವವರಿಗೆ ಸಂಸ್ಥೆಯು ಕಾರ್ಖಾನೆಯನ್ನು ಸಿದ್ದ ಮಾಡಿ ಕೊಡುತ್ತದೆ. ಪ್ರತಿ ತಾಲೂಕಿನಲ್ಲಿ ಸಿಗುವ ತ್ಯಾಜ್ಯಗಳನ್ನು ಬಳಸಿ ಜೈವಿಕ ಇಂಧನ ತಯಾರಿ ಮಾಡಲಾಗುತ್ತದೆ. ನೇಪಿಯರ್ ಗ್ರಾಸ್ (ಆನೆ ಹುಲ್ಲು) ಅನ್ನು ಬಳಸಿ ಜೈವಿಕ ಇಂಧನ ತಯಾರಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಇದನ್ನು ಸ್ಥಳೀಯ ರೈತರಿಂದ ಸಂಗ್ರಹಿಸಿ ತಾಲೂಕು ಮಟ್ಟದಲ್ಲಿ ಉತ್ಪಾದನೆ ಮಾಡುವುದು ಸಂಸ್ಥೆಯ ಗುರಿ.
ಬೃಹತ್ ಮಟ್ಟದ ಈ ಯೋಜನೆಯಿಂದ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ಎಂದು ಸಂಸ್ಥೆ ಹೇಳುತ್ತಿದೆ. ಹೊಲಗಳಲ್ಲಿ ಖಾಲಿ ಜಾಗದಲ್ಲಿ ಮತ್ತು ಹಡೀಲು ಬಿದ್ದ ಜಾಗದಲ್ಲಿ ಒಂದು ಟನ್ ನೇಪಿಯರ್ ಹುಲ್ಲು ಬೆಳೆದು ಅಂದಾಜು 4 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶವು ಇದೆ ಮತ್ತು ಈ ಯೋಜನೆಯ ಪ್ರಕಾರ 1500 ಮಂದಿಗೆ ಪ್ರತಿ ತಾಲೂಕಿನಲ್ಲಿ ಉದ್ಯೋಗಾವಕಾಶವು ಲಭ್ಯವಾಗಲಿರುವುದರಿಂದ ರೈತರಿಗೂ ಇದರಿಂದ ಪ್ರಯೋಜನ ಇದೆ ಎಂಬುದು ಕಂಪನಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.