ಪುತ್ತೂರು: ಸಾಮಾನ್ಯವಾಗಿ ಹೋಟೆಲ್, ಕ್ಯಾಂಟೀನ್ಗಳಲ್ಲಿ ಎಲ್ಲೋ ಬೆಳೆದ ಚಹಾ ಮತ್ತು ಕಾಫಿ ಪುಡಿ ಬಳಸಿ ಗ್ರಾಹಕನಿಗೆ ಕಾಫಿ, ಟೀ ಮಾಡಿ ಕೊಡಲಾಗುತ್ತದೆ. ಆದರೆ, ಈ ಕ್ಯಾಂಟೀನ್ ತುಂಬಾನೇ ವಿಭಿನ್ನ. ಈ ಕ್ಯಾಂಟೀನ್ ಕಮ್ ನರ್ಸರಿಯಲ್ಲಿ ಕೊಡುವ ಒಂದೊಂದು ಪಾನೀಯಕ್ಕೂ ಔಷಧೀಯ ಗುಣವಿದೆ. ಬ್ಯಾಂಬೂ ಟೀ, ಮಸಾಲ ಟೀ, ಗಾಂಧಾರಿ ಲೈಮ್ ಸೋಡಾ, ಏಲಕ್ಕಿ ಟೀ, ಲೆಮೆನ್ ಗ್ರಾಸ್ ಟೀ, ವೀಳ್ಯ, ಕಾಮಕಸ್ತೂರಿ, ತುಳಸಿ ಹೀಗೆ ಪರಿಸರದಲ್ಲಿ ದೊರಕುವ ಎಲ್ಲ ಗಿಡಗಳ ಟೀ ಈ ಕ್ಯಾಂಟೀನ್ ನಲ್ಲಿ ದೊರೆಯುತ್ತೆ.
ಈ ಕ್ಯಾಂಟೀನ್ನಲ್ಲಿ ಐಷಾರಾಮಿ ಆಸನ ವ್ಯವಸ್ಥೆಯಿಲ್ಲ, ಅತ್ಯಾಧುನಿಕ ಛಾವಣಿ ವ್ಯವಸ್ಥೆಯಿಲ್ಲ. ಆದರೆ, ಇಲ್ಲಿಗೆ ಬಂದ ಗ್ರಾಹಕ ಮತ್ತೊಮ್ಮೆ ಇತ್ತ ಮುಖ ಮಾಡದೇ ಇರಲಿಕ್ಕಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹೊರವಲಯದ ಮಂಗಳೂರು - ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಪರ್ಪುಂಜದಲ್ಲಿರುವ ಈ ಸೌಗಂಧಿಕಾ ಕ್ಯಾಂಟೀನ್ ಇದೆ. ಈ ಭಾಗದಲ್ಲಿ ಇದು ತುಂಬಾನೆ ಫೇಮಸ್.