ಮಂಗಳೂರು:ಕರ್ನಾಟಕ ಕರಾವಳಿ ಮೀನುಗಾರಿಕಾ ಕಾಯ್ದೆ 1986ರ ಅನ್ವಯ ರಾಜ್ಯ ಸರ್ಕಾರ ದ.ಕ ಜಿಲ್ಲೆಯಲ್ಲಿ ಎರಡು ತಿಂಗಳ ಕಾಲ ನಿಷೇಧಿಸಿದ್ದ ಯಾಂತ್ರೀಕೃತ ಮೀನುಗಾರಿಕೆಯು ನಿನ್ನೆಯಿಂದ ಮತ್ತೆ ಆರಂಭಗೊಂಡಿದೆ.
ಜಿಲ್ಲೆಯಲ್ಲಿ 1,200 ಕ್ಕೂ ಅಧಿಕ ಟ್ರಾಲ್ ದೋಣಿಗಳಿದ್ದು, ಇವುಗಳು ಮೀನುಗಾರಿಕೆಗೆ ಸಮುದ್ರಕ್ಕಿಳಿದಿವೆ. ಇವುಗಳಲ್ಲಿ 850 ಆಳ ಸಮುದ್ರ ಟ್ರೋಲ್ ದೋಣಿಗಳು ಹಾಗೂ 350 ಮರದ ದೋಣಿಗಳಿವೆ. ಇವುಗಳಲ್ಲಿ ಹೆಚ್ಚಿನ ಟ್ರಾಲ್ ಬೋಟ್ಗಳು ಮೀನುಗಾರಿಕೆಗೆ ಸಮುದ್ರಕ್ಕಿಳಿದರೂ, ಉಳಿದ ಟ್ರಾಲ್ ದೋಣಿಗಳು ಹಾಗೂ ಪರ್ಸಿನ್ ಬೋಟ್ಗಳು ಸಮುದ್ರ ಪೂಜೆಯ ಬಳಿಕ ಮೀನುಗಾರಿಕೆಗೆ ತೆರಳಲಿವೆ. ಮರದ ದೋಣಿಗಳು ಪೂರಕ ವಾತಾವರಣ ಸೃಷ್ಟಿಯಾದ ಬಳಿಕ ಸಮುದ್ರಕ್ಕಿಳಿಯಲಿವೆ.
ಯಾಂತ್ರೀಕೃತ ಮೀನುಗಾರಿಕೆ ಮತ್ತೆ ಆರಂಭ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಗರಿಷ್ಠ 350 ಅಶ್ವಶಕ್ತಿಗಳ ಇಂಜಿನ್ ಬಳಸಲು ಅನುಮತಿ ನೀಡಲಾಗಿದೆ. ಕಡ್ಡಾಯವಾಗಿ ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಏಕರೂಪದ ಬಣ್ಣ ಅಳವಡಿಸಲು ಆದೇಶ ನೀಡಲಾಗಿದೆ. ಅಲ್ಲದೆ ಎಲ್ಲಾ ಟ್ರಾಲ್ ದೋಣಿಯವರು ಕಡ್ಡಾಯವಾಗಿ 35 ಎಂಎಂ ಅಳತೆಯ ಸ್ಕ್ವೇರ್ ಮೆಶ್ ಕಾಡ್ ಎಂಡ್ ಬಲೆಯನ್ನು ಉಪಯೋಗಿಸುವುದು ಕಡ್ಡಾಯವಾಗಿದೆ.
ಇದಲ್ಲದೆ ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ಬುಲ್ ಟ್ರಾಲಿಂಗ್ ಮೀನುಗಾರಿಕೆ, ಲೈಟ್ ಫಿಶಿಂಗ್ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. ಚೌರಿ, ಚಿಂದಿ ಬಲೆ, ಕೊಳೆಯುವ ವಸ್ತುಗಳು ಹಾಗೂ ಸಮುದ್ರ ಮಾಲಿನ್ಯ ವಾಗುವಂತಹ ವಸ್ತುಗಳನ್ನು ಬಳಸಿ ಕಪ್ಪೆ ಬೊಂಡಾಸ್ ಮೀನು ಹಿಡಿಯುವುದಕ್ಕೂ ನಿರ್ಬಂಧ ಹೇರಲಾಗಿದೆ.