ಮಂಗಳೂರು:ಬುರ್ಖಾ ಧರಿಸಿ ಮಾಲ್ಗಳಲ್ಲಿ ಓಡಾಡುವ ಮುಸ್ಲಿಂ ಯುವತಿಯರಿಗೆ ಮುಸ್ಲಿಂ ಡಿಫೆನ್ಸ್ ಫೋರ್ಸ್ (ಎಂಡಿಎಫ್) ಹೆಸರಿನಲ್ಲಿ ಬೆದರಿಕೆ ಒಡ್ಡಲಾಗುತ್ತಿದ್ದು, ಈ ನೈತಿಕ ಪೊಲೀಸ್ಗಿರಿ ವಿರುದ್ಧ ಮಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಎಂಡಿಎಫ್ ಖಾತೆಯೊಂದನ್ನು ಸೃಷ್ಟಿಸಿ ಅದರಲ್ಲಿ ಬೆದರಿಕೆ ಹಾಕಿ ಸಂದೇಶಗಳನ್ನು ಹಾಕಲಾಗಿದೆ. "ಬುರ್ಖಾ ಧರಿಸಿ ಮಾಲ್ಗಳಲ್ಲಿ ಅಸಭ್ಯ ವರ್ತನೆ ಕಂಡುಬರುತ್ತಿದೆ. ಎಚ್ಚೆತ್ತುಕೊಳ್ಳಿ ಪೋಷಕರೆ, ಎಂಡಿಎಫ್ ಸಂಘಟನೆಗಳ ಕೈಗೆ ಸಿಕ್ಕಿ ಮಾನ ಹರಾಜಾಗುವ ಮುನ್ನ ಎಚ್ಚೆತ್ತುಕೊಳ್ಳಿ " ಎಂಬ ಬೆದರಿಕೆ ಸಂದೇಶ ಹಾಕಲಾಗಿದೆ.
ಸಿಟಿ ಸೆಂಟರ್ ಪಾರ್ಕಿಂಗ್ ಸ್ಥಳದಲ್ಲಿ ಬುರ್ಖಾ ಹಾಕಿಕೊಂಡು ನಿಮ್ಮ ಅಸಭ್ಯ ವರ್ತನೆಗಳನ್ನು ಕಂಡು ನಮ್ಮ ಕಾರ್ಯಕರ್ತರು ಬುದ್ಧಿಮಾತು ಹೇಳಿ ಪೋಷಕರಿಗೂ ತಿಳಿಸಿ ಎಚ್ಚರಿಕೆ ಕೊಟ್ಟಿದ್ದೇವೆ. ಆದ್ದರಿಂದ ಇನ್ನು ಮುಂದೆ ಅಂತಹ ಅಹಿತಕರ ಘಟನೆ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ ಧರ್ಮದೇಟು ಕೊಟ್ಟು ಯಾವುದೇ ಮುಲಾಜಿಲ್ಲದೆ ಕಾರ್ಯನಿರ್ವಹಿಸಲಿದ್ದೇವೆ. ಆದ್ದರಿಂದ ಪೋಷಕರೇ ನಿಮ್ಮ ಮಕ್ಕಳ ಚಲನವಲನಗಳನ್ನು ಪರಿಶೀಲನೆ ಮಾಡಿ, ಕಾಲೇಜಿಗೆ ಎಷ್ಟು ಗಂಟೆಗೆ ತಲುಪುತ್ತಾಳೆ. ಕಾಲೇಜಿನಿಂದ ಮನೆಗೆ ಎಷ್ಟು ಗಂಟೆಗೆ ತಲುಪುತ್ತಾಳೆ ಎಂದು ಗಮನಿಸಿ ಎಂದು ಬೆದರಿಕೆಯೊಡ್ಡಲಾಗಿದೆ.
ಎಂಡಿಎಫ್ ಎನ್ನುವುದು ಅಧಿಕೃತ ಸಂಘಟನೆಯಲ್ಲದಿದ್ದರೂ ಅನಧಿಕೃತವಾಗಿ ನಡೆಯುತ್ತಿದೆ ಎಂಬುದನ್ನು ಈ ಸಂದೇಶಗಳು ಬಯಲು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಇತ್ತೀಚೆಗೆ ಕೆಲವು ಮುಸ್ಲಿಂ ಸಂಘಟನೆ ಮತ್ತು ಮುಖಂಡರು ನನ್ನನ್ನು ಭೇಟಿ ಮಾಡಿ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಅದರಲ್ಲಿ ಮುಸ್ಲಿಂ ಡಿಫೆನ್ಸ್ ಫೋರ್ಸ್ 24*7 ಎಂಬ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಮಾಲ್ಗಳಲ್ಲಿ, ಶಾಲಾ ಕಾಲೇಜು ಹೊರಗಡೆ ಬುರ್ಖಾ ಹಾಕಿರುವ ಸಂದರ್ಭದಲ್ಲಿ ಬುರ್ಖಾ ತೆಗೆಯುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ಮಾಡಬಾರದು, ಗಂಡು ಮಕ್ಕಳ ಜೊತೆಗೆ ಮಾತಾಡಬಾರದು. ಈ ರೀತಿ ಮಾಡಿದರೆ ಅವರ ಪೋಷಕರು ತಿಳುವಳಿಕೆ ಹೇಳಬೇಕು. ಇಲ್ಲದಿದ್ದರೆ ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಮುಸ್ಲಿಂ ಸಮುದಾಯದ ಆಚರಣೆಗಳನ್ನು ನಾವು ರಕ್ಷಣೆ ಮಾಡಬೇಕು ಎಂಬ ರೀತಿಯಲ್ಲಿ ಮೆಸೇಜ್ ಫಾರ್ವರ್ಡ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾನಿಟರ್ ಮಾಡ್ತಾ ಇದ್ದೇವೆ. ಈ ಕೃತ್ಯ ಮಾಡಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ನಮ್ಮ ಸಾಮಾಜಿಕ ಜಾಲತಾಣ ನಿಗಾ ವಿಭಾಗದಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ಭೂಗತ ಸುರಂಗ ಪತ್ತೆ: ಫೋಟೋಗಳಿವೆ ನೋಡಿ..