ಕರ್ನಾಟಕ

karnataka

ETV Bharat / city

ಮತದಾನ ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ಮ್ಯಾರಥಾನ್​ ಓಟ - ಮ್ಯಾರಥಾನ್​ ಸ್ಪರ್ಧೆ

ಮತದಾನ ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ದ.ಕ. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮ್ಯಾರಥಾನ್​ ಸ್ಪರ್ಧೆ ಆಯೋಜಿಸಲಾಗಿತ್ತು.

ಮಂಗಳೂರಿಗರಿಂದ ಮ್ಯಾರಾಥಾನ್​ ಓಟ

By

Published : Mar 31, 2019, 9:05 PM IST

ಮಂಗಳೂರು: ಮತದಾನದ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಇಂದು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆ ನಡೆಯಿತು.

ಈ ಮ್ಯಾರಥಾನ್​ನಲ್ಲಿ 16 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ 18 ಕಿ.ಮೀ. ಮ್ಯಾರಥಾನ್ ಓಟ, 16 ವರ್ಷದ ಒಳಗಿನ ಮಕ್ಕಳಿಗೆ 6 ಕಿ.ಮೀ. ಮ್ಯಾರಥಾನ್ ಓಟ ಹಾಗೂ ಹಿರಿಯರಿಂದ 'ಮತದಾನದ ಕಡೆಗೆ ನಮ್ಮ ನಡಿಗೆ' ಎಂಬ ನಡಿಗೆ ಕಾರ್ಯಕ್ರಮವೂ ನಡೆಯಿತು.

ಮಂಗಳೂರಿಗರಿಂದ ಮ್ಯಾರಾಥಾನ್​ ಓಟ

ಈ ವೇಳೆ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್​, ಮಾಮೂಲಿಯಾಗಿ ನೋಡಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಆಗುತ್ತೆ. ಈ ಹಿನ್ನೆಲೆಯಲ್ಲಿ ಮತದಾರರಲ್ಲಿ‌ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಸಮಿತಿಯಿಂದ ಇಂದು ಮ್ಯಾರಥಾನ್ ಆಯೋಜಿಸಲಾಗಿದೆ. ‌ಸಾವಿರಕ್ಕಿಂತಲೂ ಅಧಿಕ ಮಂದಿ ಸ್ಪರ್ಧಿಗಳು ಈ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಇನ್ನು ಸ್ವೀಪ್ ಸಮಿತಿಯ ಅಧ್ಯಕ್ಷ ಡಾ. ಆರ್. ಸೆಲ್ವಮಣಿ ಮಾತನಾಡಿ, ಇಂದು ಓಟ್ ಫಾರ್ ರನ್ ಎಂಬ 18 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿದೆ. 18 ಕಿ.ಮೀ. ಯಾಕಾಗಿ ಅಂದರೆ, ಮತದಾನ ಮಾಡಲು ಅರ್ಹರಾಗುವುದು 18 ವರ್ಷಕ್ಕೆ. ಹಾಗಾಗಿ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ಇನ್ನು ದ.ಕ.ಜಿಲ್ಲೆಯಲ್ಲಿ ಎ.18 ರಂದು ಮತದಾನ ನಡೆಯುತ್ತಿದೆ. ಈ ಎರಡನ್ನೂ ಬಿಂಬಿಸುವ ರೀತಿಯಲ್ಲಿ 18 ಕಿ.ಮೀ. ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಹನುಮಂತರಾಯ, ದ.ಕ. ಜಿಲ್ಲಾ ಎಸ್ಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

ABOUT THE AUTHOR

...view details