ಮಂಗಳೂರು: ಮಾವು ಮಾರಾಟ ಮೇಳವನ್ನು ತೋಟಗಾರಿಕಾ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿಯ ಸಹಯೋಗದಲ್ಲಿ ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದು, ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದ ದೃಶ್ಯ ಕಂಡುಬಂದಿತು.
ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ಮಾವು ಮಾರಾಟ ಮೇಳ ಆಯೋಜನೆ 18 ಸ್ಟಾಲ್ಗಳಲ್ಲಿರುವ ಈ ಮಾವು ಮಾರಾಟ ಮೇಳದಲ್ಲಿ ರಾಮನಗರ, ಶ್ರೀನಿವಾಸ ಪುರ, ಕನಕಪುರ, ಕೋಲಾರ ಮೊದಲಾದ ಕಡೆಗಳಿಂದ ಮಾವು ಬೆಳೆಗಾರರು ಆಗಮಿಸಿದ್ದಾರೆ. ಮಲ್ಗೋವಾ, ರಸಪುರಿ, ಅಲ್ಫೋನ್ಸಾ, ಸಿಂಧೂರ, ತೋತಾಪುರಿ, ಸಿರಿ, ಬಾದಾಮಿ ಇನ್ನೂ ಅನೇಕ ವಿಧದ ಮಾವಿನಹಣ್ಣುಗಳು ಘಮಘಮಿಸುತ್ತಿದ್ದು, ವಿಶೇಷವೆಂದರೆ ತೋಟದಿಂದ ನೇರವಾಗಿ ತಂದ ಕಾರ್ಬೈಡ್ ಮುಕ್ತ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳು ಲಭ್ಯವಾದವು.
ಈ ಸಂದರ್ಭದಲ್ಲಿ ರಾಮನಗರದ ಮಾವು ಮಾರಾಟಗಾರ್ತಿ ರಂಜಿತಾ ಮಾತನಾಡಿ, ನಾವು ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಮಾರಾಟ ಮೇಳದಲ್ಲಿ ನಮ್ಮ ತೋಟದ ಮಾವಿನ ಹಣ್ಣನ್ನು ಮಾರುತ್ತಿದ್ದೇವೆ. ನಿನ್ನೆಗಿಂತ ಇಲ್ಲಿ ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದೆ. ಇಲ್ಲಿ ಮಾರಲ್ಪಡುವ ಎಲ್ಲಾ ಹಣ್ಣುಗಳು ರಾಸಾಯನಿಕ ಮುಕ್ತವಾಗಿದ್ದು, ನೇರವಾಗಿ ನಾವೇ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ನಮಗೂ ಅಧಿಕ ಲಾಭ ದೊರೆಯುತ್ತದೆ. ಮಂಗಳೂರಿನ ಗ್ರಾಹಕರು ಆಲ್ಫೋನ್ಸಾ, ಕಾಲಾಪುರ ಹಾಗೂ ಪದಾರ್ಥ ಮಾಡುವ ಮಾವಿನಹಣ್ಣನ್ನು ಅತೀ ಹೆಚ್ಚು ಖರೀದಿಸುತ್ತಿದ್ದಾರೆ ಎಂದರು.
ಇನ್ನು ಮಾವು ಖರೀದಿಸಲು ಬಂದಿರುವ ಗ್ರಾಹಕ ಉಡುಪಿಯ ಅಜ್ಜರಕಾಡು ಮಹಿಳಾ ಕಾಲೇಜಿನ ಉಪನ್ಯಾಸಕ ನಿತ್ಯಾನಂದ ಮಾತನಾಡಿ, ಇಲ್ಲಿ ಕಾರ್ಬೈಟ್ ಬಳಸದ, ರಾಸಾಯನಿಕ ಮುಕ್ತ ಹಣ್ಣುಗಳು ದೊರೆಯುತ್ತಿವೆ. ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇಲ್ಲಿ ಬಹಳ ಅಗ್ಗದ ದರದಲ್ಲಿ ಮಾವಿನ ಹಣ್ಣುಗಳು ದೊರೆಯುತ್ತಿವೆ. ಮಧ್ಯವರ್ತಿಗಳಿಲ್ಲದೇ ಮಾರಾಟಗಾರರಿಂದ ನೇರವಾಗಿ ಖರೀದಿ ಮಾಡುವುದರಿಂದ ಗ್ರಾಹಕರಿಗೂ ಲಾಭ. ಅಲ್ಲದೆ ವಿಷಪೂರಿತವಲ್ಲದ, ರಾಸಾಯನಿಕ ಮುಕ್ತ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಇಂತಹ ಮಾರಾಟ ಮೇಳವನ್ನು ಆಯೋಜಿಸಿದ ತೋಟಗಾರಿಕಾ ಇಲಾಖೆಗೆ ಕೃತಜ್ಞತೆಗಳು ಎಂದು ಹೇಳಿದರು.