ಮಂಗಳೂರು: ಕೊರೊನಾ ಭೀತಿ ಹಾಗೂ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಸರಳವಾಗಿ ರಂಜಾನ್ ನಮಾಜ್ ನೆರವೇರಿಸಿದರು.
ಮನೆಯಲ್ಲಿಯೇ ಸರಳವಾಗಿ ರಂಜಾನ್ ಆಚರಿಸಿದ ಮುಸ್ಲಿಂ ಬಾಂಧವರು
ಕೊರೊನಾ ಪರಿಣಾಮ ಮಸೀದಿಗೆ ತೆರಳಿ ಸಾಮೂಹಿಕ ನಮಾಜ್ ಮಾಡದಂತೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಮಂಗಳೂರಿನ ಮುಸ್ಲಿಂ ಬಾಂಧವರು ಸರಳವಾಗಿ ಮನೆಯಲ್ಲಿಯೇ ನಮಾಜ್ ನೆರವೇರಿಸಿದರು.
ಕೊರೊನಾ ಪರಿಣಾಮ ಮಸೀದಿಗೆ ತೆರಳಿ ಸಾಮೂಹಿಕ ನಮಾಜ್ ಮಾಡದಂತೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಸರಳವಾಗಿ ಮನೆ ಮಂದಿಯೇ ಸೇರಿ ನಮಾಜ್ ನೆರವೇರಿಸಿದರು. ಪ್ರತಿ ವರ್ಷ ರಂಜಾನ್ಗೆ 15 ದಿನಕ್ಕೂ ಮೊದಲೇ ಹಬ್ಬದ ಕಳೆ ಕಟ್ಟುತ್ತಿತ್ತು, ಹೊಸಬಟ್ಟೆ ಖರೀದಿ, ಅತ್ತರ್, ಖರ್ಜೂರ ಮುಂತಾದವುಗಳ ಖರೀದಿಗೆ ಮುಗಿಬೀಳುತ್ತಿದ್ದ ಮುಸ್ಲಿಂ ಬಾಂಧವರು, ಈ ಬಾರಿ ಈ ಎಲ್ಲದಕ್ಕೂ ಸ್ವಯಂ ಕಡಿವಾಣ ಹಾಕಿಕೊಂಡಿದ್ದಾರೆ. ಪದ್ಧತಿಯಂತೆ ಸರಳ ರೀತಿಯಲ್ಲಿ ರಂಜಾನ್ ಆಚರಿಸಲಾಗುತ್ತದೆ. ಎಲ್ಲರೂ ಸರ್ಕಾರ ಹಾಗೂ ಖಾಜಿಗಳು ನೀಡಿರುವ ಆದೇಶವನ್ನು ಪಾಲಿಸುತ್ತಿದ್ದಾರೆ.
ಈ ಕುರಿತು ಮಂಗಳೂರಿನ ಅಜಿಜುದ್ದೀನ್ ರಸ್ತೆಯಲ್ಲಿರುವ ಕಂದಕ್ ಫ್ರೆಂಡ್ಸ್ ಬಳಗದ ಅಧ್ಯಕ್ಷ ಎಂ.ಕೆ.ಫಯಾಝ್ ಮಾತನಾಡಿ, ಮಂಗಳೂರಿನ ಖಾಜಿಯವರು ಆದೇಶಿಸಿದಂತೆ ನಾವು ಈ ಬಾರಿ ಸರಳವಾಗಿ ರಂಜಾನ್ ಆಚರಣೆ ಮಾಡುತ್ತಿದ್ದೇವೆ. ಆದ್ದರಿಂದ ನಮಾಜ್ ಅನ್ನು ಮಸೀದಿಗಳಿಗೆ ಹೋಗಿ ಮಾಡದೇ, ಮನೆಗಳಲ್ಲಿಯೇ ನೆರವೇರಿಸುತ್ತಿದ್ದೇವೆ. ಹೊಸಬಟ್ಟೆಗಳನ್ನು ಖರೀದಿಸದೆ ಆ ಹಣವನ್ನು ಬಡವರಿಗೆ ದಾನ ನೀಡುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ದೃಷ್ಟಿಯಿಂದ ಹೊರಗೆ ಹೋಗದೆ ಮನೆಯಲ್ಲಿಯೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.