ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್ ವೇ ಯಿಂದ ಜಾರಿದ ಪರಿಣಾಮ ನಿನ್ನೆ ರಾತ್ರಿ ವೇಳೆಗೆ ವಿಮಾನದ ಹಾರಾಟದಲ್ಲಿ ಉಂಟಾಗಿದ್ದ ವ್ಯತ್ಯಯ ಪರಿಹಾರವಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸಹಜಸ್ಥಿತಿಗೆ ಬಂದಿದೆ.
ಮಂಗಳೂರು ವಿಮಾನ ನಿಲ್ದಾಣ ಈಗ ಸಹಜಸ್ಥಿತಿಯತ್ತ - undefined
ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ಕೂದಲೆಳೆ ಅಂತರದಿಂದ ತಪ್ಪಿದ್ದು, ಕೆಲ ಕಾಲ ವಿಮಾನ ಸಂಚಾರವೂ ಸ್ಥಗಿತಗೊಂಡಿತ್ತು. ಈಗ ಎಲ್ಲವೂ ಸರಿಯಾಗಿ ಮತ್ತೆ ಸಹಜಸ್ಥಿತಿಯಲ್ಲಿದ್ದು ವಿಮಾನ ಹಾರಾಟ ಎಂದಿನಂತೆ ಪ್ರಾರಂಭಗೊಂಡಿದೆ.
ಯಾವುದೇ ವಿಮಾನಗಳ ಲ್ಯಾಂಡಿಂಗ್ ಮಾಡುವುದಕ್ಕಾಗಲೀ ಮತ್ತು ಟೇಕಾಫ್ ಮಾಡಲು ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸಹಜಸ್ಥಿತಿಗೆ ಮರಳಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ ವಿ ರಾವ್ ತಿಳಿಸಿದ್ದಾರೆ.
ನಿನ್ನೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿ ಇಳಿಯಲು ಮಾಡಿದ ಪ್ರಯತ್ನದಲ್ಲಿ ಟ್ಯಾಕ್ಸಿ ವೇ ಯಿಂದ ತಿರುಗುತ್ತಿದ್ದ ಸಂದರ್ಭದಲ್ಲಿ ಜಾರಿ ಮಣ್ಣಿನ ಭಾಗಕ್ಕೆ ಹೋಗಿತ್ತು. ಭಾರಿ ದುರಂತ ತಪ್ಪಿದ ಹಿನ್ನೆಲೆಯಲ್ಲಿ 183 ಪ್ರಯಾಣಿಕರು ಮತ್ತು 6 ವಿಮಾನ ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದರು.
ಈ ಘಟನೆ ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವಿಮಾನವನ್ನು ಬೇರೆ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ವಿಮಾನವನ್ನು ತಡೆಹಿಡಿಯಲಾಗಿತ್ತು. ರನ್ ವೇ ಪರಿಶೀಲನೆ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅನುಮತಿ ಪಡೆದು ವಿಮಾನ ಹಾರಾಟ ಪುನರಾರಂಭಗೊಳಿಸಲಾಗಿದೆ.