ಮಂಗಳೂರು: ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ, ನ್ಯಾಯವಾದಿ ರಾಜೇಶ್ ಭಟ್ ಎಸ್ಕೇಪ್ ಆಗಿ 56 ದಿನಗಳಾದರೂ ಆತನ ಪತ್ತೆಯಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಕಾಣದ ಬಗ್ಗೆ ನೊಂದಿರುವ ಸಂತ್ರಸ್ತೆ ಮಾಧ್ಯಮದ ಮುಂದೆ ಬಂದಿದ್ದಾಳೆ.
ನಾನು ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಾಗಿ 56 ದಿನಗಳು ಕಳೆದಿವೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಪ್ರಗತಿಯಿಲ್ಲ. ಆರೋಪಿಯ ಬಂಧನ ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ನಾವು ಪೊಲೀಸರಿಗೆ ಒತ್ತಡ ಹಾಕುತ್ತಿದ್ದೇವೆ. ಆದರೆ, ಅವರಿಂದ ನಮಗೆ ಒಂದಿಷ್ಟು ಕಿರುಕುಳ ಸಿಕ್ಕಿದೆ ಹೊರತು ಬೇರೇನೂ ಫಲ ದೊರಕಿಲ್ಲ ಎಂದರು.
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ಇದನ್ನೂ ಓದಿರಿ:ಸ್ಯಾಂಡಲ್ವುಡ್ ಸ್ಮಗ್ಲಿಂಗ್ ಜಾಲ ಬೇಧಿಸಿದ ಸಿಸಿಬಿ ಪೊಲೀಸ್, 1 ಕೋಟಿ ರೂ. ಮೌಲ್ಯದ ಶ್ರೀಗಂಧ ವಶಕ್ಕೆ
ಎಸಿಪಿ ಕಚೇರಿಯಿಂದ ಮಹಿಳಾ ಸಿಬ್ಬಂದಿ ಎಂದು ಕರೆ ಮಾಡುತ್ತಾರೆ. ಆದರೆ, ಎಸಿಪಿಯವರು ಮಾತಿಗೆ ಸಿಗುತ್ತಿಲ್ಲ. ಕೆಲವೊಂದು ಸಲ ಮಾತನಾಡಲು ದೊರಕಿದರೂ, ನನಗೆ ಸಹಾಯ ಮಾಡುತ್ತಿರುವ ಸಂಘಟನೆಯೊಂದಿಗೆ ಹೋಗಬೇಡ, ಅವರ ಮೇಲೆ ನಂಬಿಕೆ ಇಡಬೇಡ ಎಂದು ಒತ್ತಡ ಹೇರುತ್ತಾರೆ. ಜೊತೆಗೆ, ಆರೋಪಿ ರಾಜೇಶ್ ಭಟ್ ಪತ್ನಿ ಬಹಳ ನೊಂದಿದ್ದಾರೆ. 3-4 ಸಲ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆಂಬ ಮಾತುಗಳು ಪೊಲೀಸರಿಂದ ಕೇಳಿ ಬರುತ್ತಿವೆ.
ಇತ್ತೀಚೆಗೆ ಆರೋಪಿ ರಾಜೇಶ್ ಭಟ್ ಪತ್ನಿಯ ಬಂಧನವಾಗಿತ್ತು. ಆದರೆ, ಅದು ಆತನ ಬಂಧನಕ್ಕೆ ಎಷ್ಟು ಸಹಕಾರಿಯೋ ತಿಳಿದಿಲ್ಲ. ಇಷ್ಟು ದಿನಗಳ ಕಾಲ ಆತನ ಬಂಧನ ಆಗಿಲ್ಲವೆಂದರೆ, ಇದರ ಹಿಂದೆ ಭಾರೀ ದೊಡ್ಡ ಕೈವಾಡವಿದೆ ಎಂದು ಅನಿಸುತ್ತದೆ. ಪದೇ ಪದೇ ಪೊಲೀಸರಲ್ಲಿ ಬಂಧನ ಮಾಡಿ ಎಂದು ಒತ್ತಡ ಹೇರಿ ಹೇರಿ ಬೇಸರ ಬಂದು ಬಿಟ್ಟಿದೆ ಎಂದು ಸಂತ್ರಸ್ತ ಯುವತಿ ಅಳಲು ಹೊರಹಾಕಿದರು.