ಕರ್ನಾಟಕ

karnataka

ETV Bharat / city

ಸೆ.16ರಿಂದ ಮಂಗಳೂರು ವಿವಿ ಪರೀಕ್ಷೆ: ಕುಲಪತಿ ಯಡಪಡಿತ್ತಾಯ - ಮಂಗಳೂರು ವಿವಿ ಪರೀಕ್ಷೆಗಳು

ಮಂಗಳೂರು ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ ಪರೀಕ್ಷೆ ಸೆಪ್ಟಂಬರ್​ 16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ‌.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

Mangalore University  Degree & Postgraduate Examination to begin on September 16th
ಮಂಗಳೂರು ವಿವಿ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಸೆ.16ರಿಂದ ಆರಂಭ

By

Published : Aug 13, 2020, 9:24 PM IST

ಮಂಗಳೂರು:ರಾಜ್ಯ ಸರ್ಕಾರ ಹಾಗೂ ಯುಜಿಸಿ ನಿರ್ದೇಶನದ ಮೇರೆಗೆ ಮಂಗಳೂರು ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ ಪರೀಕ್ಷೆ ಸೆಪ್ಟಂಬರ್​ 16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ‌.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ಸೆ.16ರಿಂದ ಮಂಗಳೂರು ವಿವಿ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ

ನಗರದ ಹಂಪನಕಟ್ಟೆಯಲ್ಲಿರುವ ವಿವಿ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮ‌ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲದೆ ಅನುತ್ತೀರ್ಣಗೊಂಡು ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳಿಗೆ ಹಿಂಬಾಕಿ ಪತ್ರಿಕೆಗಳ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶುಲ್ಕ ಪಾವತಿ ಮಾಡಲು ಬಾಕಿಯಿರುವ ಹಾಗೂ ಪರೀಕ್ಷಾ ನೋಂದಣಿ ಮಾಡದ ವಿದ್ಯಾರ್ಥಿಗಳು ಆಗಸ್ಟ್​ 17ರೊಳಗೆ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಬೇಕು. ಕೊರೊನಾ ಸೋಂಕಿನ ಕಾರಣದಿಂದ ಪರೀಕ್ಷಾ ಶುಲ್ಕ ಪಾವತಿ ಮಾಡಲು ಸಾಧ್ಯವಾಗದಿದ್ದವರಿಗೆ ಪರೀಕ್ಷೆ ಬರೆಯಲು ಈ ಬಾರಿ ಅವಕಾಶ ನೀಡಲಾಗಿದೆ. ‌ಅವರಿಗೆ ಶುಲ್ಕ ಪಾವತಿಗೆ ಅಂಕಪಟ್ಟಿ ಪಡೆದುಕೊಳ್ಳುವವರೆಗೆ ಸಮಯಾವಕಾಶ ನೀಡಲಾಗುತ್ತದೆ. ಆದರೆ, ಪರೀಕ್ಷೆಗೆ ಹಾಜರಾಗಬೇಕಾಗಿದ್ದಲ್ಲಿ ಆಯಾ ಸೆಮಿಸ್ಟರ್​ನಲ್ಲಿ ಕನಿಷ್ಠ ಹಾಜರಾತಿ ಅಗತ್ಯ ಎಂದರು.

ಅಂತಿಮ ಸೆಮಿಸ್ಟರ್ ಹೊರತುಪಡಿಸಿ ಇಂಟರ್ ಮೀಡಿಯೇಟ್ ಸೆಮಿಸ್ಟರ್​ಗಳ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ, ನಿಗದಿತ ಮಾನದಂಡಗಳ ಆಧಾರದಲ್ಲಿ ಮುಂದಿನ ಸೆಮಿಸ್ಟರ್​ಗೆ ಮುಂಬಡ್ತಿ ನೀಡಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದರೆ, ಅಂತವರಿಗೆ ಸುರಕ್ಷತಾ ವಿಧಾನದೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಲು ಅನಾನುಕೂಲ ಇರುವುದರಿಂದ ಅವರವರ ರಾಜ್ಯಗಳಲ್ಲಿಯೇ ಪರೀಕ್ಷೆ ಬರೆಯಲು ಅಲ್ಲಿನ ವಿವರಗಳೊಂದಿಗೆ ಒಡಂಬಡಿಕೆ ಮಾಡಿ, ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ.

ಈಗಾಗಲೇ ಭೂತಾನ್ ಹಾಗೂ ಮಣಿಪುರ ವಿವಿಗಳು ಒಪ್ಪಿಗೆ ಸೂಚಿಸಿವೆ. ಕೇರಳದ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪರೀಕ್ಷೆ ನಡೆಸಲು ಕಣ್ಣೂರು ಹಾಗೂ ಸೆಂಟ್ರಲ್ ವಿವಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ಏಕಕಾಲದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಪರೀಕ್ಷೆ ನಡೆಸಲು ಅನಾನುಕೂಲ ಆದಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ‌.

ABOUT THE AUTHOR

...view details