ಮಂಗಳೂರು: ಸುಳ್ಳು ವದಂತಿಯನ್ನು ನಂಬಿ ತಮ್ಮ ತವರೂರಿಗೆ ತೆರಳಲೆಂದು ನಗರದ ಸೆಂಟ್ರಲ್ ರೈಲೆ ನಿಲ್ದಾಣದಲ್ಲಿ ಜಮಾಯಿಸಿದ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಪೊಲೀಸರು ಮಧ್ಯಸ್ಥಿಕೆ ವಹಿಸಿ ಮನವೊಲಿಕೆ ಮಾಡಿದ್ದಾರೆ. ಪರಿಣಾಮ ಇದೀಗ ಎಲ್ಲರೂ ಮನೆಯತ್ತ ತೆರಳಿದರು.
ಪೊಲೀಸರ ಮಧ್ಯಸ್ಥಿಕೆ: ಮತ್ತೆ ಮನೆಕಡೆಗೆ ಪ್ರಯಾಣಿಸಿದ ಉತ್ತರದ ವಲಸೆ ಕಾರ್ಮಿಕರು
ತಮಗೆ ತವರಿಗೆ ಮರಳುವ ವ್ಯವಸ್ಥೆ ಮಾಡಬೇಕೆಂದು ಮಂಗಳೂರಿನಲ್ಲಿ ವಲಸೆ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಅಂತಿಮವಾಗಿ ಇನ್ನು 2-3 ದಿನದೊಳಗೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಪೊಲೀಸ್ ಆಯುಕ್ತರು ಭರವಸೆ ನೀಡಿದ ಬಳಿಕ ಉತ್ತರ ಭಾರತದ ವಲಸೆ ಕಾರ್ಮಿಕರು ಮರಳಿ ತಮ್ಮ ಮನೆಯತ್ತ ತೆರಳಿದರು.
ಲಾಕೌಡೌನ್ ಪರಿಣಾಮ ಎಲ್ಲೂ ಹೋಗಲಾರದೆ ಮಂಗಳೂರಿನಲ್ಲಿಯೇ ಬಾಕಿ ಉಳಿದ ಸುಮಾರು 700-800 ಹೊರ ರಾಜ್ಯದ ವಲಸೆ ಕಾರ್ಮಿಕರು, ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ತಮಗೆ ತವರಿಗೆ ಮರಳುವ ವ್ಯವಸ್ಥೆ ಆಗದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಧರಣಿ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ 3 ದಿನಗಳೊಳಗೆ ಎಲ್ಲರಿಗೂ ಊರಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿಯವರೆಗೆ ಸಂಯಮದಿಂದಿರಿ ಎಂದು ಮನವಿ ಮಾಡಿದರು.
ಆದರೆ 2 ದಿನಗಳೊಳಗೆ ವ್ಯವಸ್ಥೆ ಕಲ್ಪಿಸುವಂತೆ ವಲಸೆ ಕಾರ್ಮಿಕರು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ. ಕೊನೆಗೂ ವಲಸೆ ಕಾರ್ಮಿಕರ ಮನವೊಲಿಕೆ ಮಾಡಿದ ಪೊಲೀಸರು, ಅವರನ್ನು ಮನೆಗಳತ್ತ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.