ಕರ್ನಾಟಕ

karnataka

ETV Bharat / city

ಮದುವೆ ದಿಬ್ಬಣ ಬಸ್ ಅಪಘಾತ ಪ್ರಕರಣ : ಆರು ತಿಂಗಳು ಕಳೆದರೂ ಸಿಗದ ಪರಿಹಾರ - ಮಂಗಳೂರು ಮದುವೆ ಬಸ್ ಅಪಘಾತ

ಮನೆಯ ಆಧಾರಸ್ತಂಭಗಳನ್ನೇ ಈ ಅವಘಡದಿಂದ ಕಳೆದುಕೊಂಡಿರುವ ಹಲವು ಕುಟುಂಬಗಳು ಈಗಲೂ ಜೀವನಕ್ಕಾಗಿ ಪರದಾಡಬೇಕಾದ ಸ್ಥಿತಿಯಲ್ಲಿದೆ. ಮಾನವೀಯತೆಯ ನೆಲೆಯಲ್ಲಿ ನೊಂದ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಸ್ಥಳೀಯ ಶಾಸಕ, ಸಚಿವರಿಗೆ ಮನವಿಯನ್ನೂ ಮಾಡಲಾಗಿದ್ದು, ಈವರೆಗೂ ಯಾವುದೇ ಸ್ಪಂದಿನೆ ದೊರೆತಿಲ್ಲ..

mangalore-marriage-bus-accident-victims-did-not-get-relief
ಬಸ್ ಅಪಘಾತ

By

Published : Jun 26, 2021, 7:47 PM IST

ಮಂಗಳೂರು :ಮದುವೆ ದಿಬ್ಬಣ ಬಸ್ ಅಪಘಾತಕ್ಕೀಡಾಗಿ ಏಳು ಮಂದಿ ಸಾವನ್ನಪ್ಪಿದ ಘಟನೆ ಸಂಭವಿಸಿ ಆರು ತಿಂಗಳು ಕಳೆದಿವೆ. ಆದರೆ, ಘಟನೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮಾತ್ರ ಈವರೆಗೂ ಆರಂಭಗೊಂಡಿಲ್ಲ. ಇದರಿಂದಾಗಿ ಪರಿಹಾರಕ್ಕಾಗಿ ಕಾಯುತ್ತಿರುವ ಬಡ ಕುಟುಂಬಗಳ ಸ್ಥಿತಿ ಇಂದಿಗೂ ಚಿಂತಾಜನಕವಾಗಿದೆ. ಮನೆಯ ಆಧಾರಸ್ತಂಭಗಳೇ ಇಲ್ಲದ ಬಡ ಕುಟುಂಬ ಪರಿಹಾರಕ್ಕಾಗಿ ಸರಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ ಬಲ್ನಾಡು ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕರ್ ಮಗಳ ಮದುವೆ ಕಾರ್ಯಕ್ರಮಕ್ಕೆ ಚನಿಲ ಗ್ರಾಮದ ಹತ್ತಕ್ಕೂ ಹೆಚ್ಚು ಕುಟುಂಬ ಹೊರಟಿದ್ದವು. ಜನವರಿ 3, 2021ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಞಂಗಾಡ್‌ನ ಪಾಣತ್ತೂರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದರು.

ಮದುವೆ ದಿಬ್ಬಣ ಬಸ್ ಅಪಘಾತ ಪ್ರಕರಣ, 6 ತಿಂಗಳಾದರೂ ಇನ್ನೂ ಸಿಕ್ಕಿಲ್ಲ ಸಂತ್ರಸ್ತರಿಗೆ ಪರಿಹಾರ..

ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಂದು ಆದೇಶಿಸಿದ್ದರು. ಆದರೆ, ಘಟನೆ ನಡೆದ ಆರು ತಿಂಗಳು ಕಳೆದರೂ, ಅದಕ್ಕೆ ಸಂಬಂಧಿಸಿದ ಚಾರ್ಜ್‌ಶೀಟ್ ಈವರೆಗೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ಇದರಿಂದಾಗಿ ಪರಿಹಾರದ ನಿರೀಕ್ಷೆಯಲ್ಲಿರುವ ಬಡ ಕುಟುಂಬಗಳ ಸ್ಥಿತಿ ಕಂಗಾಲಾಗಿದೆ. ದುಡಿಯುವ ಕೈಗಳೇ ಈ ಅವಘಡದಲ್ಲಿ ಸಾವನ್ನಪ್ಪಿದ ಕಾರಣ ಈ ಕುಟಂಬಗಳಿಗೆ ಆಸರೆಯಿಲ್ಲದ ಸ್ಥಿತಿಯೂ ಇದೆ.

ಘಟನೆಯಲ್ಲಿ ಮೃತಪಟ್ಟ ಐವರು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದವರಾಗಿದ್ದಾರೆ. ಇನ್ನಿಬ್ಬರಲ್ಲಿ ಬಸ್ ಚಾಲಕ ಬಂಟ್ವಾಳ ತಾಲೂಕಿನ ಕಲ್ಲಡ್ಕ ಹಾಗೂ ಇನ್ನೋರ್ವ ಸುಳ್ಯ ತಾಲೂಕಿನ ಜಾಲ್ಸೂರಿಗೆ ಸೇರಿದವರಾಗಿದ್ದಾರೆ. ಗಾಯಾಳುಗಳು ಪಾಣತ್ತೂರು ಆಸ್ಪತ್ರೆ, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪುತ್ತೂರಿನಲ್ಲಿ ಚಿಕಿತ್ಸೆ ಪಡೆದವರು ಗಾಯದ ಸರ್ಟಿಫಿಕೇಟ್​ಗಳನ್ನು ಪಾಣತ್ತೂರು ಪೊಲೀಸರಿಗೆ ತಲುಪಿಸುವ ಕಾರ್ಯ ಪುತ್ತೂರು ನಗರ ಪೊಲೀಸ್​​ ಠಾಣೆಯ ಮೂಲಕ ನಡೆದಿದೆ.

ಆದರೆ, ಉಳಿದವರ ಸರ್ಟಿಫಿಕೇಟ್​ಗಳನ್ನು ಪಾಣತ್ತೂರು ಪೋಲೀಸರು ಇನ್ನೂ ಸಂಗ್ರಹಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಮೃತ ಕುಟುಂಬಗಳ ಸದಸ್ಯರು ಪಾಣತ್ತೂರು ಪೊಲೀಸ್ ಠಾಣೆಗೆ ಹಲವು ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ಕಾರಣಕ್ಕಾಗಿ ಕೊಂಚ ತಡವಾಗುತ್ತಿದೆ ಎನ್ನುವ ಸ್ಪಷ್ಟನೆಯನ್ನೂ ಪೊಲೀಸರು ನೀಡುತ್ತಿದ್ದಾರೆ. ಅಲ್ಲದೆ, ಅಫಘಾತಕ್ಕೀಡಾದ ಬಸ್‌ನಲ್ಲಿ ಸರಿಯಾದ ದಾಖಲೆ ಪತ್ರಗಳು ಇರಲಿಲ್ಲ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಈ ಕಾರಣಕ್ಕಾಗಿ ಸರಕಾರದ ವತಿಯಿಂದ ನೊಂದ ಕುಟುಂಬಗಳಿಗೆ ಪರಿಹಾರ ನೀಡುವುದು ಕಷ್ಟಸಾಧ್ಯವಾಗಿದೆ ಎನ್ನಲಾಗಿದೆ. ಬಸ್‌ನ ದಾಖಲೆ ಪತ್ರಗಳು ಇಲ್ಲ ಎನ್ನುವ ತಮ್ಮದಲ್ಲದ ತಪ್ಪಿಗೆ ಈ ಬಡ ಕುಟುಂಬಗಳಿಗೆ ಪರಿಹಾರ ನೀಡದೇ ಇರುವುದು ಯಾವ ನ್ಯಾಯ ಎನ್ನುವ ಪ್ರಶ್ನೆಗಳೂ ಇದೀಗ ಕೇಳಿ ಬರಲಾರಂಭಿಸಿವೆ.

ಮನೆಯ ಆಧಾರಸ್ತಂಭಗಳನ್ನೇ ಈ ಅವಘಡದಿಂದ ಕಳೆದುಕೊಂಡಿರುವ ಹಲವು ಕುಟುಂಬಗಳು ಈಗಲೂ ಜೀವನಕ್ಕಾಗಿ ಪರದಾಡಬೇಕಾದ ಸ್ಥಿತಿಯಲ್ಲಿದೆ. ಮಾನವೀಯತೆಯ ನೆಲೆಯಲ್ಲಿ ನೊಂದ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಸ್ಥಳೀಯ ಶಾಸಕ, ಸಚಿವರಿಗೆ ಮನವಿಯನ್ನೂ ಮಾಡಲಾಗಿದ್ದು, ಈವರೆಗೂ ಯಾವುದೇ ಸ್ಪಂದಿನೆ ದೊರೆತಿಲ್ಲ.

ABOUT THE AUTHOR

...view details