ಮಂಗಳೂರು: ಲಾಕ್‌ಡೌನ್ ಪರಿಣಾಮ ನಗರ ಸಂಪೂರ್ಣ ಸ್ಥಗಿತಗೊಂಡಿದೆ. ಅಗತ್ಯ ಸಾಮಾಗ್ರಿಗಳಿಗಾಗಿ ಮಾತ್ರ ಸಾರ್ವಜನಿಕರಿಗೆ ಮನೆಯಿಂದ ಹೊರ ಬರಬಹುದು. ಮಿಕ್ಕಂತೆ ಎಲ್ಲರೂ ಮನೆಯಲ್ಲಿದ್ದು ಕೋವಿಡ್ - 19 ಸೋಂಕು ತಡೆಗಟ್ಟಲು ಸಹಕರಿಸುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚಿಸಿದೆ.
ಜನತೆಯೂ ಇದಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರ ಬರುವ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ತಿರುಗಾಡಿದಲ್ಲಿ ಪೊಲೀಸರು ವಾಹನ ಜಪ್ತಿ ಮಾಡುವ ಭಯದಿಂದ ವಾಹನಗಳ ಓಡಾಟವೂ ಕೂಡಾ ವಿರಳವಾಗಿದೆ.
ಕಡಲನಗರಿಯಲ್ಲಿ ಯಶಸ್ವಿ ಲಾಕ್ ಡೌನ್ ಸೆಂಟ್ರಲ್ ಮಾರುಕಟ್ಟೆ ಮತ್ತು ಸ್ಟೇಟ್ ಬ್ಯಾಂಕ್ ಬಳಿಯ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರ ಮಾಡಲಾಗಿದೆ. ಇದರಿಂದ ಜನರು ತೊಂದರೆಗೀಡಾಗಿದ್ದಾರೆ. ಮೊದಲು ಎರಡೂ ಕಡೆಗಳಲ್ಲಿ ಸಾಧಾರಣ ಸಗಟು ದರದಲ್ಲಿ ಹಣ್ಣು ತರಕಾರಿಗಳು ಲಭ್ಯವಾಗುತ್ತಿತ್ತು. ಇದೀಗ ಈ ಮಾರುಕಟ್ಟೆಗಳನ್ನು ಅವಲಂಬಿಸುತ್ತಿದ್ದ ಜನರಿಗೆ ಇಲ್ಲಿಗಿಂತ ದುಬಾರಿ ಹಣ ತೆತ್ತು ಅಗತ್ಯ ವಸ್ತುಗಳ ಖರೀದಿ ಮಾಡುವ ಪರಿಸ್ಥಿತಿ ಉಂಟಾಗಿದೆ.
ಹೂವಿನ ವ್ಯಾಪಾರವೂ ಸಂಪೂರ್ಣ ಸ್ಥಗಿತವಾಗಿದ್ದು, ಜೀನಿಯಾ, ಕಾಕಡ ಹಾಗೂ ಸೇವಂತಿಗೆ ಮಾತ್ರ ಸಣ್ಣ ಮಟ್ಟದಲ್ಲಿ ದೊರೆಯುತ್ತಿವೆ. ಅದೂ ಹಾಸನ ಕಡೆಗಳಿಂದ ಲಾರಿಗಳು ಬಂದಲ್ಲಿ ಮಾತ್ರ ದೊರೆಯುತ್ತದೆ. ಆದರೆ ಕೆಲವೊಂದು ಬಾರಿ ಕೊಳ್ಳುವವರಿಲ್ಲದೆ ನಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ.