ಮಂಗಳೂರು:ನಗರದ ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮತ್ತೆ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಮೇಶ್ ಪೂಜಾರಿ(41), ಮಂಗಳೂರಿನ ಪಡೀಲ್ ಅಳಪೆಯ ಚಂದ್ರಾವತಿ (36), ಬೆಂಗಳೂರು ದೊಡ್ಡ ತೋಗೂರಿನ ಸುರೇಂದ್ರ ರೆಡ್ಡಿ(35) ಕೆಎಂಎಫ್ನಲ್ಲಿ ಉದ್ಯೋಗ ವಂಚನೆ ಕೇಸ್ ಸಂಬಂಧ ಬಂಧಿತರಾದವರು.
ಈ ಪ್ರಕರಣದ ಪ್ರಮುಖ ಆರೋಪಿಯಾದ ರಾಮಪ್ರಸಾದ್ರಾವ್ ಆಲಿಯಾಸ್ ಹರೀಶ್ ಆಲಿಯಾಸ್ ಕೇಶವ ಎಂಬುವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಇದೀಗ ಮತ್ತೆ ಮೂವರನ್ನು ಬಂಧಿಸುವ ಮೂಲಕ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಕರಣದ ವಿವರ:ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ರಾಮಪ್ರಸಾದ್ ರಾವ್ ಪಿ ಆಲಿಯಾಸ್ ಹರೀಶ್ (37) ಎಂಬುವರು ಕೆಎಂಎಫ್ನಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗ ದೊರಕಿಸಿಕೊಡುತ್ತೇನೆ. ಅದಕ್ಕಾಗಿ ಹಣ ನೀಡಬೇಕು ಎಂದು ಉದ್ಯೋಗಾಕಾಂಕ್ಷಿಗಳನ್ನು ಯಾಮಾರಿಸಿ ಹಲವರಿಂದ ಸುಮಾರು 1.84 ಕೋಟಿ ರೂಪಾಯಿ ಹಣವನ್ನು ಪೀಕಿದ್ದರು ಎನ್ನಲಾಗ್ತಿದೆ.
ಹಣ ಪಡೆದು ಕೆಎಂಎಫ್ ಡೈರಿಯ ನಕಲಿ ಉದ್ಯೋಗ ನೇಮಕಾತಿ ಪತ್ರ, ಕೆಎಂಎಫ್ ಐಡಿ ಕಾರ್ಡ್ ನೀಡಿ ಅವರಿಗೆ ಉದ್ಯೋಗ ಸಿಕ್ಕಿರುವಂತೆ ಭರವಸೆ ಮೂಡಿಸುತ್ತಿದ್ದರು. ನೇಮಕಾತಿಯ ನೆಪದಲ್ಲಿ ಹಲವು ಮಂದಿಗೆ ತರಬೇತಿಯನ್ನೂ ಸಹ ನೀಡಿದ್ದrಂತೆ.
ಇದಾದ ಬಳಿಕ ಇನ್ನೂ ನಾಲ್ವರ ಬಳಿ ಉದ್ಯೋಗ ನೀಡುವ ಭರವಸೆ ನೀಡಿ 112.5 ಲಕ್ಷ ಹಣ ಪಡೆದಿದ್ದರು. ಆದರೆ ಉದ್ಯೋಗ ನೀಡಿರಲಿಲ್ಲ. ಕೊನೆಗೆ ವಂಚನೆಗೊಳಗಾದವರು ಪೊಲೀಸ್ ದೂರು ನೀಡಿದ ವೇಳೆ ಕರ್ಮಕಾಂಡ ಬೆಳಕಿಗೆ ಬಂದಿತ್ತು.
ಓದಿ:ಕೊಪ್ಪಳದಲ್ಲಿ ಆಕಸ್ಮಿಕ ಅಗ್ನಿ ಅವಘಡ.. ಬೆಂಕಿಗಾಹುತಿಯಾದ 6 ವರ್ಷದ ಬಾಲಕ