ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯರ ಜೊತೆಗೆ ನಡೆಸಿದ ಸಭೆ ಮುಕ್ತಾಯಗೊಂಡಿದೆ. ಸಿಂಡಿಕೇಟ್ ಸಭೆಯ ನಿರ್ಣಯವನ್ನು ಪಾಲಿಸಲು ಸೂಚಿಸಲಾಗಿದೆ. ಸಭೆಯಲ್ಲಿ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಕಡ್ಡಾಯ ಮಾಡಿದ ಬಗ್ಗೆ ಆಕ್ಷೇಪಿಸಿದ ವಿದ್ಯಾರ್ಥಿನಿಯರು ಸಭೆಯಲ್ಲಿ ಭಾಗಿಯಾಗಿದ್ದರು. ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಬದಲಿಸಲು ಜಿಲ್ಲಾಮಟ್ಟದಲ್ಲಿ ಸಾಧ್ಯವಿಲ್ಲ.
ಸಿಂಡಿಕೇಟ್ ಸಭೆಯ ನಿರ್ಧಾರವನ್ನು ಕಾಲೇಜಿನೊಳಗೆ ಪಾಲಿಸಬೇಕು. ಇದನ್ನು ಕಾನೂನು ರೀತ್ಯವಾಗಿ ನೋಡಬೇಕಾಗುತ್ತದೆಯೇ ಹೊರತು ಕಾಲೇಜಿನ ಆವರಣದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳ ಜೊತೆ ಚರ್ಚಿಸಲಾಗಿದೆ. ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ಕುರಿತಾಗಿ ತೆಗೆದುಕೊಂಡ ನಿರ್ಣಯದ ಅಧಿಕೃತ ಪತ್ರ ತಮಗೆ ನೀಡಲ್ಲ.
ನಿರ್ಣಯವನ್ನು ವಾಟ್ಸ್ಆ್ಯಪ್ ಮೂಲಕ ರವಾನಿಸಿದ್ದಾರೆ ಎಂದು ವಿದ್ಯಾರ್ಥಿಗಳು ನಮ್ಮಲ್ಲಿ ದೂರಿದ್ದಾರೆ. ನಿರ್ಣಯ ಆದೇಶ ಪತ್ರವನ್ನು ಕೊಡಿಸುವುದಾಗಿ ತಿಳಿಸಿದ್ದೇನೆ. ಸಿಂಡಿಕೇಟ್ ನಿರ್ಧಾರವನ್ನು ಪಾಲನೆ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ ಎಂದರು. ಹೈಕೋರ್ಟ್ ಆದೇಶದ ಅನ್ವಯ ಆಯಾ ಸಂಸ್ಥೆಗಳು ನಿರ್ಧಾರ ತೆಗೆದುಕೊಳ್ಳುತ್ತವೆ. ಈ ಕಾಲೇಜಿನಲ್ಲಿ ಆದೇಶದ ವಿರುದ್ಧವಾದ ನಿರ್ಣಯ ತೆಗೆದುಕೊಂಡಿದ್ದರೆ, ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ ಎಂದರು.
ಓದಿ:UPSCಯಲ್ಲಿ 3ನೇ ರ್‍ಯಾಂಕ್ ಪಡೆದ ಗಾಮಿನಿ ಸಿಂಗ್ಲಾ.. ಕರ್ನಾಟಕ ಸಾಧಕರ ವಿವರ ಇಲ್ಲಿದೆ..