ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ನೇರವಾಗಿ ಬೆಂಗಳೂರು ಪೊಲೀಸರಿಗೆ ಶರಣಾಗುವ ಪರಿಸ್ಥಿತಿ ಇದೆಯೆಂದರೆ ಇದು ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಮಾಜಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.
ಮಾಜಿ ಸಚಿವ ಯು.ಟಿ ಖಾದರ್ ಸುದ್ದಿಗೋಷ್ಠಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಗಂಭೀರ ವಿಚಾರ. ಆರೋಪಿ ಬಾಂಬ್ ಇಟ್ಟು ಬೆಂಗಳೂರಿಗೆ ಹೋಗುವುದು ಪೊಲೀಸರಿಗೆ ಗೊತ್ತಾಗಲಿಲ್ಲವೆ? ಎಂದು ಪ್ರಶ್ನಿಸಿದ ಅವರು, ಸಮಾಜದ್ರೋಹಿಗಳಿಗೆ ಧರ್ಮವಿಲ್ಲ, ಎಲ್ಲಾ ಧರ್ಮದಲ್ಲೂ ಸಮಾಜದ್ರೋಹಿಗಳಿದ್ದಾರೆ ಎಂಬುದು ಗೊತ್ತಾಗಲಿದೆ. ಇದೊಂದು ಸಮಾಜ ವಿರೋಧಿ ಕೆಲಸ, ಆದಿತ್ಯರಾವ್ ಕೃತ್ಯದ ಹಿಂದೆ ಬೇರೆಯವರ ಸಹಕಾರ ಇರಬಹುದು. ಸತ್ಯಾಸತ್ಯಾತೆಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತನಿಖೆ ಮೊದಲೇ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದೆ ಗುಪ್ತಚರ ಇಲಾಖೆ , ಗೃಹ ಇಲಾಖೆ ನೋಡಿ ಅನುಭವ ಇದ್ದವರು. ಅದರ ಆಧಾರದಲ್ಲಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು.
ಬಾಂಬ್ ಪತ್ತೆಯಾದಾಗ ಮೊದಲು ಏನೆಲ್ಲಾ ಹೇಳಿದರು, ಈಗ ಮಾನಸಿಕ ಅಸ್ವಸ್ಥ, ಕಚ್ಚಾಬಾಂಬ್ ಅಂತಾರೆ. ಎರಡು ದಿನಗಳ ಬಳಿಕ ಆರೋಪಿ ಶರಣಾಗಿದ್ದರಿಂದ ಅಂತ್ಯ ದೊರಕಿತು. ಈ ಕೃತ್ಯದ ಹಿಂದೆ ಒಂದು ವ್ಯವಸ್ಥಿತ ಸಂಚು ಇದೆ. ಆತನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸುವ ಕೆಲಸ ಆಗುತ್ತಿದೆ. ಆತನಿಗೆ ಬಾಂಬ್ ಇಡುವಾಗ ತಲೆ ಸರಿ ಇತ್ತಾ? ಎಂದು ಪ್ರಶ್ನಿಸಿದರು. ಹಾಗೂ ಬಾಂಬ್ ಇಟ್ಟದ್ದು ಮೊದಲ ಭದ್ರತಾ ವೈಫಲ್ಯ, ಆತ ಬೆಂಗಳೂರಿಗೆ ಹೋದದ್ದು ಎರಡನೇ ವೈಫಲ್ಯ ಎಂದು ಆರೋಪಿಸಿದರು.