ಮಂಗಳೂರು:ಅತಿ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೃತಪಟ್ಟ ಆರೋಪ ಸಾಬೀತಾದ ಹಿನ್ನೆಲೆ, ಆರೋಪಿಗೆ ಆರು ತಿಂಗಳ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
2015 ಡಿಸೆಂಬರ್ 27ರ ಮಧ್ಯಾಹ್ನ 1.30ರ ಸುಮಾರಿಗೆ ಬೆಂಗಳೂರಿನ ಬಾಲಾಜಿ ನಗರದ ಬಿಜು ಎಸ್. ಪಿಳ್ಳೈ ಎಂಬಾತ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 73ರ ಕಣ್ಣೂರು ಕೊಡಕಲ್ನ ವೋಕ್ಸ್ ವೇಗನ್ ಶೋರೂಂ ಎದುರು ಗಣೇಶ್ ಹಾಗೂ ಜೀವನ್ ಆಚಾರ್ಯ ಎಂಬುವವರು ಸವಾರಿ ಮಾಡುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದರು.
ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಗಣೇಶ್ ಪ್ರಾಣಾಪಾಯದಿಂದ ಪಾರಾಗಿದ್ದರು, ಆದ್ರೆ ಜೀವನ್ ಆಚಾರ್ಯ ತಲೆ ಹಾಗೂ ದೇಹದ ಮತ್ತಿತರ ಭಾಗಗಳಿಗೆ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ 2016 ಜನವರಿ 4ರಂದು ಮೃತಪಟ್ಟಿದ್ದರು. ಪ್ರಕರಣ ಸಂಚಾರಿ ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ದಾಖಲಾಗಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಅಶ್ವಿನಿ ಕೋರೆ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿ ಆರೋಪಿ ಬಿಜು ಎಸ್. ಪಿಳ್ಳೈಗೆ ಸೆಕ್ಷನ್ 279 ಅನ್ವಯ 45 ದಿನ ಸಾದಾ ಶಿಕ್ಷೆ 1000 ರೂ. ದಂಡ, ಸೆಕ್ಷನ್ 337 (ಅಪಘಾತ) ರ ಪ್ರಕಾರ 45 ದಿನ ಸಾಧಾರಣ ಶಿಕ್ಷೆ 500 ರೂ. ದಂಡ ಹಾಗೂ ಸೆಕ್ಷನ್ 304(A) ರ ಪ್ರಕಾರ 6 ತಿಂಗಳು ಕಾರಾಗೃಹ ವಾಸ 5000 ರೂ. ದಂಡ ವಿಧಿಸಿದೆ.
ದಂಡ ವಿಧಿಸಲು ತಪ್ಪಿದ್ದಲ್ಲಿ ಮತ್ತೆ ಆರು ತಿಂಗಳು ಕಾರಾಗೃಹ ವಾಸ ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಅಶ್ವಿನಿ ಕೋರೆ ತೀರ್ಪು ನೀಡಿದ್ದಾರೆ.