ಸುಬ್ರಮಣ್ಯ (ದಕ್ಷಿಣ ಕನ್ನಡ):ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮತ್ತು ರಾಷ್ಟ್ರೀಯ ಹೆದ್ದಾರಿ 276 ಸಂಪಾಜೆ ಘಾಟ್ ರಸ್ತೆ ಸಂಪರ್ಕ ಕಡಿತಗೊಂಡಿರುವ ಕಾರಣದಿಂದಾಗಿ ಜುಲೈ 26 ರಿಂದ ಆಗಸ್ಟ್ 31ರ ವರೆಗೆ ಮಂಗಳೂರು - ಬೆಂಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಆರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೇ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿ ರೈಲು ಸಂಚಾರ ಮಾಡಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದೆ. ಜುಲೈ 26 ರಿಂದ ಆಗಸ್ಟ್ 31 ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಮಂಗಳೂರು ಸೆಂಟ್ರಲ್ (MAQ) ಮತ್ತು KSR ಬೆಂಗಳೂರು (SBC) ನಡುವೆ ಮೈಸೂರು ಮಾರ್ಗವಾಗಿ ವಾರಕ್ಕೆ ಮೂರು ಬಾರಿ ಹೆಚ್ಚುವರಿ ವಿಶೇಷ ರೈಲುಗಳು ಸಂಚರಿಸಲಿದೆ.
ರೈಲು ಸಂಖ್ಯೆ 06547 ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರ ಚಲಿಸುತ್ತದೆ. ಇದು ಬೆಂಗಳೂರಿನಿಂದ (SBC) ರಾತ್ರಿ 8.30ಕ್ಕೆ ಹೊರಟು ಬೆಳಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ (MAQ) ತಲುಪಲಿದೆ. ಈ ರೈಲು ಕೆಂಗೇರಿ (ರಾತ್ರಿ 8.49), ರಾಮನಗರ (ರಾತ್ರಿ 9.13), ಚನ್ನರಾಯಪಟ್ಟಣ (ರಾತ್ರಿ 9.24), ಮಂಡ್ಯ (ರಾತ್ರಿ 9.54), ಮೈಸೂರು (ರಾತ್ರಿ 11:00), ಕೃಷ್ಣರಾಜನಗರ (ರಾತ್ರಿ 11.49), ಹೊಳೆನರಸೀಪುರ (12.43) ಹಾಸನ (ಬೆಳಗ್ಗೆ 1.35), ಸಕಲೇಶಪುರ (ಬೆಳಗ್ಗೆ 3:00), ಸುಬ್ರಹ್ಮಣ್ಯ ರೋಡ್ (ಬೆಳಗ್ಗೆ 6.10), ಕಬಕ ಪುತ್ತೂರು (7.30), ಬಂಟ್ವಾಳ (7.30), ಮಂಗಳೂರು ಜಂಕ್ಷನ್ (ಬೆಳಗ್ಗೆ 8.13) ತಲುಪಲಿದೆ.